Agriculture

ರೈತರ ಸಂತೆಯಲ್ಲಿ ಮಳೆರಾಯನ ಅಬ್ಬರ: ಕೆಸರು ಗದ್ದೆಯಾದ ಮಾರುಕಟ್ಟೆ, ಸಂಕಷ್ಟದಲ್ಲಿ ಅನ್ನದಾತ

Share

ಖಾಸಗಿ ಮಾರುಕಟ್ಟೆ ರದ್ದತಿಯಿಂದಾಗಿ ಎಪಿಎಂಸಿ ಆವರಣಕ್ಕೆ ಸ್ಥಳಾಂತರಗೊಂಡಿರುವ ರೈತರಿಗೆ ಮಳೆರಾಯ ವಿಘ್ನ ತಂದೊಡ್ಡಿದ್ದಾನೆ. ಮೂಲಭೂತ ಸೌಕರ್ಯಗಳಿಲ್ಲದ ರವಿವಾರದ ಸಂತೆಯಲ್ಲಿ ರೈತರು ಕೆಸರಿನಲ್ಲೇ ಕುಳಿತು ವ್ಯಾಪಾರ ಮಾಡುವ ದುಸ್ಥಿತಿ ಎದುರಾಗಿದ್ದು, ವ್ಯಾಪಾರಿಗಳ ಗೋಳು ಕೇಳುವವರೇ ಇಲ್ಲದಂತಾಗಿದೆ.

ಖಾಸಗಿ ‘ಜೈ ಕಿಸಾನ್ ಭಾಜಿ ಮಾರ್ಕೆಟ್’ ಅನುಮತಿ ರದ್ದಾದ ಹಿನ್ನೆಲೆಯಲ್ಲಿ, ಅಲ್ಲಿಂದ ಎಪಿಎಂಸಿ ಆವರಣದ ರವಿವಾರದ ರೈತರ ಸಂತೆಗೆ ಶಿಫ್ಟ್ ಆಗಿರುವ ವ್ಯಾಪಾರಿಗಳು ಮೊದಲ ದಿನವೇ ಮಳೆಯ ಅವಾಂತರಕ್ಕೆ ಸಿಲುಕಿದ್ದಾರೆ. ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಇಡೀ ಮಾರುಕಟ್ಟೆ ಪ್ರದೇಶ ಕೆಸರು ಗದ್ದೆಯಂತಾಗಿದ್ದು, ವಾಹನಗಳಿಂದ ತರಕಾರಿ ಚೀಲಗಳನ್ನು ಕೆಳಗಿಳಿಸಲು ರೈತರು ಹರಸಾಹಸ ಪಡುತ್ತಿದ್ದಾರೆ. ಸಮರ್ಪಕ ನೆಲೆ ಇಲ್ಲದೆ ಅತ್ತ ಮಳೆಯ ಹೊಡೆತ, ಇತ್ತ ಕೆಸರಿನ ರಾಡಿಯಿಂದಾಗಿ ರೈತರು ಕಣ್ಣೀರು ಹಾಕುತ್ತಿದ್ದಾರೆ.

ಮಾರುಕಟ್ಟೆಯ ಅವ್ಯವಸ್ಥೆಯಿಂದಾಗಿ ಗ್ರಾಹಕರು ಇತ್ತ ಸುಳಿಯುತ್ತಿಲ್ಲ ಎಂಬುದು ರೈತರ ಅಳಲಾಗಿದೆ. “ನೂರಾರು ಕಿಲೋಮೀಟರ್ ದೂರದಿಂದ ತರಕಾರಿ ತಂದಿದ್ದೇವೆ, ಆದರೆ ಇಲ್ಲಿನ ಕೆಸರು ನೋಡಿ ಜನ ಬರುತ್ತಿಲ್ಲ, ತಂದ ಮಾಲು ಮಳೆಗೆ ನೆನೆದು ಹಾಳಾಗುತ್ತಿದೆ” ಎಂದು ವ್ಯಾಪಾರಿಗಳು ಅಳಲು ತೋಡಿಕೊಂಡಿದ್ದಾರೆ. ಸರ್ಕಾರ ಮತ್ತು ಸಂಬಂಧಪಟ್ಟ ಅಧಿಕಾರಿಗಳು ಕೇವಲ ನಿಯಮಗಳನ್ನು ಹೇರದೆ, ವ್ಯಾಪಾರಕ್ಕೆ ಪೂರಕವಾದ ವಾತಾವರಣ ಮತ್ತು ಕನಿಷ್ಠ ಸೌಕರ್ಯಗಳನ್ನು ಒದಗಿಸಿಕೊಡಬೇಕೆಂದು ಒತ್ತಾಯಿಸಿದ್ದಾರೆ.

ಪ್ರಸ್ತುತ ಎಪಿಎಂಸಿ ಆವರಣದಲ್ಲಿರುವ ಸಂತೆಗಿಂತಲೂ ಮೊದಲಿದ್ದ ಖಾಸಗಿ ಜೈ ಕಿಸಾನ್ ಮಾರುಕಟ್ಟೆಯೇ ನಮಗೆ ಅನುಕೂಲಕರವಾಗಿತ್ತು ಎಂಬುದು ರೈತರ ಅಭಿಪ್ರಾಯ. ಅಲ್ಲಿನಂತೆಯೇ ವ್ಯವಸ್ಥಿತವಾದ ಮಾರುಕಟ್ಟೆಯನ್ನು ಸರ್ಕಾರ ಕೂಡಲೇ ಒದಗಿಸಬೇಕು ಅಥವಾ ಪರ್ಯಾಯ ವ್ಯವಸ್ಥೆ ಮಾಡಬೇಕು ಎಂದು ರೈತರು ಪಟ್ಟು ಹಿಡಿದಿದ್ದಾರೆ. ಬಡ ರೈತರ ಮತ್ತು ಸಣ್ಣ ವ್ಯಾಪಾರಿಗಳ ಹೊಟ್ಟೆ ಮೇಲೆ ಹೊಡೆಯದೆ, ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ಈ ಸಮಸ್ಯೆ ಬಗೆಹರಿಸಬೇಕೆಂದು ಆಗ್ರಹಿಸಲಾಗಿದೆ.

Tags:

error: Content is protected !!