ಈ ಭೂಮಿಗೆ ನೀವು ಬೊಗಸೆ ನೀರು ಕೊಟ್ಟರೆ ಸಾಕು, ಇದು ಅಮೇರಿಕಾದ ಕ್ಯಾಲಿಫೋರ್ನಿಯಾವನ್ನೇ ಮೀರಿಸುತ್ತದೆ ಎಂದು ನಡೆದಾಡುವ ದೇವರು, ಶತಮಾನದ ಸಂತ ಲಿಂಗೈಕ್ಯ ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳು ಹೇಳಿದ್ದ ಮಾತು ಇನ್ನೂ ಎಲ್ಲರ ಕಿವಿಯಲ್ಲಿ ಗುನುಗುತ್ತಿದೆ. ಶ್ರೀಗಳು ಹೇಳಿದ್ದ ಮಾತನ್ನು ಗಂಭೀರವಾಗಿ ಪರಿಗಣಿಸಿದ ಸಚಿವ ಎಂ.ಬಿ.ಪಾಟೀಲರು ನೀರಾವರಿ ಮಾಡಿದ್ದಾರೆ. ಈ ಹಿನ್ನೆಲೆ ಇದೀಗ ಕ್ಯಾಲಿಫೋರ್ನಿಯಾದಲ್ಲಿ ಬೆಳೆಯುವ ಫೇಮಸ್ ದ್ರಾಕ್ಷಿಯನ್ನೇ ಬರದ ನಾಡಿನಲ್ಲೂ ಬೆಳೆದು ರೈತರು ಸೈ ಎನಿಸಿಕೊಳ್ಳಲು ಮುಂದಾಗಿದ್ದಾರೆ. ಈ ಕುರಿತಾದ ಒಂದು ಕಂಪ್ಲೀಟ್ ವರದಿ ಇಲ್ಲಿದೆ ನೋಡಿ…


ಹೌದು ಗುಮ್ಮಟ ನಗರಿ ವಿಜಯಪುರ ಜಿಲ್ಲೆಯ ರೈತರು ಈಗ ಕ್ಯಾಲಿಪೋರ್ನಿಯಾದಲ್ಲಿ ಬೆಳೆಯುವ ದ್ರಾಕ್ಷಿ ಬೆಳೆಯಲು ಮುಂದಾಗಿದ್ದಾರೆ. ಕ್ಯಾಲಿಫೋರ್ನಿಯಾ ಟು ತಿಕೋಟಾ ಜರ್ನಿ ಬೆಳೆಸಿದ ಔರಾ-36 ತಳಿಯ ಕಂದು ಬಣ್ಣದ ದ್ರಾಕ್ಷಿ ಬೆಳೆಯಲಾಗುತ್ತಿದೆ. ಅಮೇರಿಕಾದ ಕ್ಯಾಲಿಫೋರ್ನಿಯಾದಲ್ಲಿ ಅತೀ ಹೆಚ್ಚು ಬೆಳೆಯಲಾಗುವ ಈ ಔರಾ-36 ದ್ರಾಕ್ಷಿ ನೋಡಲು ಕಂದು ಬಣ್ಣದ್ದಾಗಿದ್ದು, ಹೆಚ್ಚಿನ ರಾಸಾಯನಿಕ ಬಳಸದೆಯೇ ಹೆಚ್ಚಿನ ಇಳುವರಿ ಕೊಡುತ್ತದೆ. ನೋಡಲು ಆಕರ್ಷಕವಾಗಿರುವ ಈ ದ್ರಾಕ್ಷಿಯು ತಿನ್ನಲು ಸಹ ಅಷ್ಟೆ ರುಚಿಕರವಾಗಿದ್ದು, ನೋಡುಗರನ್ನು ತನ್ನತ್ತ ಸೆಳೆಯುತ್ತದೆ. ಇದು ಕ್ಯಾಲಿಫೋರ್ನಿಯಾದ ಗ್ರಾಫಾ ಗ್ಲೋಬಲ್ ಕಂಪನಿಯ ಪೆಟೆಂಟ್ ನ ವೆರೈಟಿಯಾಗಿದ್ದು, ಇದನ್ನು ನಾಸಿಕನ ಸಹ್ಯಾದ್ರಿ ಫಾರ್ಮ್ಸ್ (ಎಫ್‌ಪಿಓ) ನವರು ವಿಸ್ತರಣೆ ಮಾಡಲು ಅನುಮತಿ ಪಡೆದಿದ್ದಾರೆ. ಅಲ್ಲಿಂದ ವಿಜಯಪುರ ಜಿಲ್ಲೆಯ ತಿಕೋಟಾಗೆ ಕಾಲಿಟ್ಟಿರುವ ಈ ದ್ರಾಕ್ಷಿ ಇದೀಗ ಜಿಲ್ಲೆಯಲ್ಲಿ ಹೆಚ್ಚಿನ ರೈತರು ಈ ದ್ರಾಕ್ಷಿ ಬೆಳೆಯಲು ಮುಂದಾಗಿದ್ದಾರೆ…


ಮಹಾರಾಷ್ಟ್ರದ ನಾಸಿಕನ ಸಹ್ಯಾದ್ರಿ ಫಾರ್ಮ್ಸ್ ನ ವಿಲಾಸರಾವ ಶಿಂಧೆ ಅವರ ಸಹಯೋಗದಲ್ಲಿ ಕ್ಯಾಲಿಪೋರ್ನಿಯಾದಲ್ಲಿ ಬೆಳೆಯುವ ಉತ್ಕೃಷ್ಟ ದರ್ಜೆಯ ಔರಾ-36 ತಳಿಯ ದ್ರಾಕ್ಷಿಯನ್ನು ತಿಕೋಟಾದ ಕೃಷ್ಣವೇಣಿ ಎಫ್.ಬಿ.ಓ ನವರು ಇಲ್ಲಿ ಪರಿಚಯಿಸಿದ್ದಾರೆ. ಈ ಮೊದಲು ಇಲ್ಲಿ ಬೆಳೆಯಲಾಗುತ್ತಿದ್ದ ಮಾಣಿಕ ಚಮನ್, ಥಾಮ್ಸನ್ ಸೀಡಲೆಸ್, ಸೋನಾಕಾ ಈ ದ್ರಾಕ್ಷಿ ತಳಿಗಳಿಗೆ ಹೂ ಬಿಡುವ ಸಮಯದಲ್ಲಿ, ಕಾಯಿ ಗೊಂಚಲು ಹಿಡಿಯುವಾಗ, ದ್ರಾಕ್ಷಿ ಸೈಜ್ ಹಾಗೂ ಕಲರ್ ಬರಲೆಂದು ಹಲವು ರಾಸಾಯನಿಕಗಳನ್ನು ಬಳಸಬೇಕಾದ ಅನಿವಾರ್ಯತೆ ಇತ್ತು. ಆದರೆ ಈ ಔರಾ-36 ತಳಿಗೆ ಇದ್ಯಾವುದರ ಗೊಡವೆಯೇ ಇಲ್ಲ. ಹಿಗಾಗಿಯೇ ಇದು ಕೇವಲ 20 ಪರ್ಸೆಂಟ್ ಮೆಂಟೆನೆನ್ಸ್ ಖರ್ಚು, 20 ಪರ್ಸೆಂಟ್ ಔಷಧಿಯಲ್ಲೇ ದ್ರಾಕ್ಷಿ ಕೈಗೆ ಬರುತ್ತದೆ. ಕ್ಯಾಲಿಫೋರ್ನಿಯಾದಿಂದ ನಾಸಿಕಗೆ ಬಂದ ಈ ದ್ರಾಕ್ಷಿಯನ್ನು ರಾಜ್ಯದಲ್ಲಿಯೇ ಮೊಟ್ಟ ಮೊದಲ ಬಾರಿಗೆ ತಿಕೋಟಾದ ರೈತರು ಪರಿಚಯಿಸಿದ್ದಾರೆ. ವಿಜಯಪುರ ಜಿಲ್ಲೆಯ ತಿಕೋಟಾದ ರೈತರಾದ ಸಂದೀಪ ಪಾಟೀಲ 1.5 ಎಕರೆ, ಯಮನಪ್ಪ ಕೊಣ್ಣೂರ 1.5 ಎಕರೆ, ರಾಜೇಂದ್ರ ಕುಸೂರ 2 ಎಕರೆ, ಅತಾಲಟ್ಟಿ ಗ್ರಾಮದಲ್ಲಿ ಡಾ.ಸುಭಾಷ ಮುದನೂರ 8 ಎಕರೆ, ತಾಜಪೂರದ ರಾಜು ಹಾಲಳ್ಳಿ 2 ಎಕರೆ, ನಿಡೋಣಿಯ ರಾವುತ ದರ್ಗಾ 9 ಎಕರೆಯಲ್ಲಿ ದ್ರಾಕ್ಷಿ ನಾಟಿ ಮಾಡಿದ್ದಾರೆ. 2025 ಜನೆವರಿಯಲ್ಲಿ ನಾಟಿ ಮಾಡಿದ್ದು, ಸೆಪ್ಟೆಂಬರ್ ತಿಂಗಳಿನಲ್ಲಿ ನಾಸಿಕನಿಂದ ಔರಾ-36 ತಳಿಯ ಕಡ್ಡಿಗಳನ್ನು ತಂದು ಕಸಿ ಮಾಡಲಾಗಿದ್ದು, ಈ ಫಸಲು 2027 ಫೆಬ್ರುವರಿಯಲ್ಲಿ ತಿಕೋಟಾದ ರೈತರು ಬೆಳೆದ ದ್ರಾಕ್ಷಿಯ ಮೊದಲ ಫಸಲು ಮಾರುಕಟ್ಟೆಗೆ ಬರಲಿದೆ…

ಇದು ನೋಡಲು ಕಂದು ಬಣ್ಣದಿಂದ ಕೂಡಿದ್ದು ಆಕರ್ಷಕವಾಗಿದೆ. ಇದನ್ನು 48 ಡಿಗ್ರಿ ತಾಪಮಾನದಲ್ಲಿಯೂ ಬೆಳೆಯಬಹುದಾಗಿದೆ. ಯಾವುದೇ ತಾಪಮಾನದಲ್ಲೂ ಶೇಕಡಾ 100ರಷ್ಟು ಹೂ ಬಿಡಲಿದೆ. ಉತ್ತಮ ಸೈಜು ಸಿಗಲಿದ್ದು, ಉತ್ತಮ ಬಣ್ಣ ಹೊಂದಿದ್ದು, ಉತ್ಕೃಷ್ಠವಾಗಿ, ರುಚಿಕರವಾಗಿರುತ್ತದೆ. ಈ ಫಸಲು ಬಂದಾಗ ಮಳೆಯಾದರೆ ದ್ರಾಕ್ಷಿ ಹಣ್ಣು ಸೀಳುವುದಿಲ್ಲ, ಔರಾ-36 ದ್ರಾಕ್ಷಿಯೂ ಈಗಾಗಲೇ ಪ್ರತಿ ಕೆಜಿ ಗೆ ರೂ. 150ರಿಂದ 160 ರಂತೆ ಸಾಂಗ್ಲಿ, ತಾಸಗಾಂವನಲ್ಲಿ ಮಾರಾಟವಾಗಿದ್ದು, ಅಲ್ಲಿಂದ ಯುರೇಪಿಯನ್ ರಾಷ್ಟ್ರಗಳಿಗೆ ರಫ್ತಾಗುತ್ತಿದೆ. ಹೀಗಾಗಿ ಈ ದ್ರಾಕ್ಷಿಯನ್ನು ಬೆಳೆದವರು ಮೂರು ಪಟ್ಟು ಲಾಭ ಮಾಡಿಕೊಳ್ಳಬಹುದಾಗಿದೆ. ಹೀಗಾಗಿ ವಿದೇಶಿ ತಳಿಯ ದ್ರಾಕ್ಷೀಯನ್ನು ಜಿಲ್ಲೆಯಲ್ಲಿ ಉತ್ತಮ ಲಾಭ ಗಳಿಸಲು ರೈತರು ಮುಂದಾಗಿದ್ದು ನಿಜಕ್ಕೂ ಶ್ಲಾಘನೀಯವೇ ಸರಿ…
