ಅಭಿವೃದ್ಧಿ ಹೆಸರಲ್ಲಿ ರೈತರ ಜಮೀನು ಕಿತ್ತುಕೊಳ್ಳುವುದು ಹೊಸದೇನಲ್ಲ, ಆದರೆ ನ್ಯಾಯಯುತ ಪರಿಹಾರಕ್ಕಾಗಿ ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗದಿದ್ದಾಗ ರೈತ ಆತ್ಮಹತ್ಯೆಗೆ ಯತ್ನ ಮಾಡಿದ್ದಾನೆ. ಅಧಿಕಾರಿಗಳ ಎದುರಲ್ಲೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವಾದರೂ ರೆನು ಎಂಬುದರ ಕುರಿತಾದ ಒಂದು ವರದಿ ಇಲ್ಲಿದೆ ನೋಡಿ…

ಒಂದೆಡೆ ಐಸಿಯು ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೈತನ ದೃಶ್ಯ, ಇನ್ನೊಂದೆಡೆ ರೈತನ ಯೋಗಕ್ಷೇಮ ವಿಚಾರಿಸಲು ಬಂದ ರೈತ ಮುಖಂಡರು. ಈ ಎಲ್ಲ ದೃಶ್ಯಗಳು ಕಂಡು ಬಂದಿದ್ದು ವಿಜಯಪುರ ಜಿಲ್ಲಾ ಆಸ್ಪತ್ರೆಯಲ್ಲಿ. ಹೌದು ಇಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿರೋದು 44 ವರ್ಷದ ರೈತ ಮಲ್ಲನಗೌಡ ಹನುಮಂತಗೌಡ ಬಿರಾದಾರ ಎಂಬಾತ. ವಿಜಯಪುರ ಜಿಲ್ಲೆಯ ತಳೇವಾಡ ಗ್ರಾಮದ ಈ ರೈತನ ಜಮೀನಿನಲ್ಲಿ ಕೂಡಗಿ ಎನ್‌ಟಿಪಿಸಿಯಿಂದ ಸೊಲ್ಲಾಪುರಕ್ಕೆ ವಿದ್ಯುತ್ ಪೂರೈಸುವ ಬೃಹತ್ ಕಂಬಗಳನ್ನು ಅಳವಡಿಸಲು ಡಬ್ಲೂ ಆರ್ ಎಸ್ (WRS) ಕಂಪನಿಯ ಅಧಿಕಾರಿಗಳು ಪೊಲೀಸರೊಂದಿಗೆ ಆಗಮಿಸಿದ್ದರು. ಸುಮಾರು 3 ಗುಂಟೆ ಜಮೀನು ಹಾನಿಯಾಗುವುದರಿಂದ ನೊಂದ ರೈತ ಸೂಕ್ತ ಪರಿಹಾರಕ್ಕೆ ಬೇಡಿಕೆ ಇಟ್ಟಿದ್ದರು. ಆದರೆ ಅಧಿಕಾರಿಗಳು ಕೇವಲ 15 ಲಕ್ಷ ಕೊಡುವ ಭರವಸೆ ನೀಡಿದ್ದು, 30 ಲಕ್ಷ ಪರಿಹಾರಕ್ಕೆ ರೈತ ಪಟ್ಟು ಹಿಡಿದಿದ್ದರು. ಈ ಸಂದರ್ಭದಲ್ಲಿ ರೈತನಿಗೆ ಅಧಿಕಾರಿಗಳು ದಬಾಯಿಸಿದ ಕಾರಣ ಮನನೊಂದ ರೈತ ಅಧಿಕಾರಿಗಳ ಎದುರಲ್ಲೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಇನ್ನೂ ನಮಗೆ ಮೂರು ಮಕ್ಕಳಿವೆ ಇರುವದೇ ಎರಡು ಎಕರೆ ಜಮೀನು ಅದಿಷ್ಟು ಹಾನಿಯಾದರೆ ನಾವು ಬದಕುವದಾದರೂ ಹೇಗೆ ಎಂದು ಮಲ್ಲನಗೌಡ ಪತ್ನಿ ಸಂಗಮ್ಮಆಕ್ರೋಶ ಹೊರ ಹಾಕಿದ್ದಾರೆ…

ಕೇವಲ ಎರಡು ಎಕರೆ ಜಮೀನು ಹೊಂದಿದ ರೈತ ಮಲ್ಲನೌಡ ಬಿರಾದಾರ ತಮ್ಮ ಜಮೀನಿನಲ್ಲಿ ಹೈ ಟೆನ್ಷನ್ ವಿದ್ಯುತ್ ಎಳೆಯುವದರಿಂದ ಬೆಳೆ ಬರಲ್ಲ ಜಮೀನು ಸಂಪೂರ್ಣವಾಗಿ ಹಾನಿಯಾಗುತ್ತದೆ, ಗದಗ ಜಿಲ್ಲೆಯಲ್ಲಿ ಹೇಗೆ ರೈತರಿಗೆ ಪರಿಹಾರ ಕೊಟ್ಟರೋ ಅದೇ ಮಾದರಿಯಲ್ಲಿ ಕೊಡಿ ಎಂದಿದ್ದಾನೆ. ಇದಕ್ಕೆ ಒಪ್ಪದ ಅಧಿಕಾರಿಗಳು ಪೊಲೀಸರ ಬಲ ಬಳಸಿ ಕೆಲಸ ಆರಂಭಿಸಲು ಮುಂದಾದಾಗ, ರೈತ ಮಲ್ಲನಗೌಡ ತಾಳ್ಮೆ ಕಳೆದುಕೊಂಡಿದ್ದಾರೆ. ಅಧಿಕಾರಿಗಳು ಹಾಗೂ ಪೊಲೀಸರ ಎದುರೇ ಕೀಟನಾಶಕ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ತಕ್ಷಣವೇ ಅವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಅವರ ಸ್ಥಿತಿ ಅತ್ಯಂತ ಗಂಭೀರವಾಗಿದೆ. ವಿಷಯ ತಿಳಿಯುತ್ತಿದ್ದಂತೆ ಜಿಲ್ಲಾಸ್ಪತ್ರೆಗೆ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ಭೇಟಿ ನೀಡಿ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಇತ್ತ ಉಪವಿಭಾಗಾಧಿಕಾರಿ ಗುರುನಾಥ್ ದಡ್ಡೆ ಕೂಡ ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ. ಇನ್ನು ಈ ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಉಳಿದ ರೈತರು ಪರಿಹಾರಕ್ಕೆ ಒಪ್ಪಿದ್ದಾರೆ, ಆದರೆ ಕೆಲವರು ಮಾತ್ರ ಅಧಿಕಾರಿಗಳನ್ನು ಬ್ಲಾಕ್ ಮೇಲ್ ಮಾಡುತ್ತಿದ್ದಾರೆ ಎಂದು ಸಚಿವರು ಹೇಳಿದ್ದಾರೆ…
ತನಗಾದ ಅನ್ಯಾಯಕ್ಕೆ ನ್ಯಾಯ ಕೇಳುವುದು ಬ್ಲಾಕ್ ಮೇಲ್ ಹೇಗಾಗುತ್ತದೆ ಎಂದು ರೈತರು ಆಕ್ರೋಶ ಹೊರ ಹಾಕಿದ್ದಾರೆ. ಇನ್ನೂ ಕಂಪನಿಗಳು ಮತ್ತು ಸರ್ಕಾರದ ನಡುವೆ ಸಿಲುಕಿರುವ ಅನ್ನದಾತ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ ಮಾಡಿರುವದು ನಿಜಕ್ಕೂ ವಿಪರ್ಯಾಸವೇ ಸರಿ…
