Bagalkote

ಹುನಗುಂದ ಪುರಸಭೆ ಮೇಲೆ ಲೋಕಾಯುಕ್ತ ದಾಳಿ: ಇ-ಸ್ವತ್ತು ವಿಳಂಬಕ್ಕೆ ಅಧಿಕಾರಿಗಳ ಬೆವರಿಳಿಸಿದ ಟೀಮ್!

Share

• ಹುನಗುಂದ ಪುರಸಭೆ ಮೇಲೆ ಲೋಕಾಯುಕ್ತ ದಾಳಿ
• ಲಂಚ ಕೇಳುತ್ತಿದ್ದ ಅಧಿಕಾರಿಗಳಿಗೆ ಬಿತ್ತು ಬಿಸಿ
• ಇ-ಸ್ವತ್ತು ವಿಳಂಬಕ್ಕೆ ಲೋಕಾಯುಕ್ತ ಅಧಿಕಾರಿಗಳ ಗರಂ
• ಸ್ಥಳದಲ್ಲೇ ನಾಲ್ವರಿಗೆ ಉತಾರೆ ಕೊಡಿಸಿದ ತಂಡ

ಬಾಗಲಕೋಟೆ ಜಿಲ್ಲೆಯ ಹುನಗುಂದ ಪುರಸಭೆಯಲ್ಲಿ ಲಂಚದ ಹಾವಳಿ ಮಿತಿಮೀರಿದೆ ಎಂಬ ಸಾರ್ವಜನಿಕರ ದೂರಿನ ಬೆನ್ನಲ್ಲೇ ಲೋಕಾಯುಕ್ತ ಅಧಿಕಾರಿಗಳು ದಿಢೀರ್ ದಾಳಿ ನಡೆಸಿದ್ದಾರೆ. ಇ-ಸ್ವತ್ತು ಮತ್ತು ಕಟ್ಟಡ ಅನುಮತಿಗಾಗಿ ಅಲೆದಾಡಿಸುತ್ತಿದ್ದ ಅಧಿಕಾರಿಗಳಿಗೆ ಸ್ಥಳದಲ್ಲೇ ಕ್ಲಾಸ್ ತೆಗೆದುಕೊಂಡಿರುವ ಲೋಕಾಯುಕ್ತರು, ತನಿಖೆಯನ್ನು ಚುರುಕುಗೊಳಿಸಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಹುನಗುಂದ ಪುರಸಭೆಯಲ್ಲಿ ಇ-ಸ್ವತ್ತು, ಎನ್‌ಓಸಿ ಹಾಗೂ ಕಟ್ಟಡ ನಿರ್ಮಾಣ ಅನುಮತಿ ನೀಡಲು ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಲಂಚಕ್ಕೆ ಬೇಡಿಕೆ ಇಡುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಕರ್ನಾಟಕ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಎಂ.ಬಿ. ನಂದಗಾವಿ ಅವರ ಮಾರ್ಗದರ್ಶನದಲ್ಲಿ ಡಿಎಸ್‌ಪಿ ಸುರೇಶ ರೆಡ್ಡಿ ಹಾಗೂ ಇನ್ಸ್‌ಪೆಕ್ಟರ್ ಬಿ.ಎ. ಬಿರಾದಾರ ನೇತೃತ್ವದ ತಂಡ ಇಂದು ಕಾರ್ಯಾಲಯದ ಮೇಲೆ ದಾಳಿ ನಡೆಸಿತು. ದಾಳಿಯ ವೇಳೆ ಸಾರ್ವಜನಿಕರಿಗೆ ಉತಾರೆ ನೀಡುವಲ್ಲಿ ಅನಗತ್ಯ ವಿಳಂಬ ಮಾಡುತ್ತಿರುವುದು ಪತ್ತೆಯಾಗಿದ್ದು, ಅಧಿಕಾರಿಗಳು ಸ್ಥಳದಲ್ಲೇ ನಾಲ್ವರು ಫಲಾನುಭವಿಗಳಿಗೆ ಉತಾರೆ ಕೊಡಿಸುವ ಮೂಲಕ ಬಿಸಿ ಮುಟ್ಟಿಸಿದ್ದಾರೆ. ಕಚೇರಿಯ ಪ್ರಮುಖ ದಾಖಲೆಗಳನ್ನು ವಶಪಡಿಸಿಕೊಂಡಿರುವ ತಂಡ, ಲಂಚದ ಜಾಲದ ಕುರಿತು ಸಿಬ್ಬಂದಿಗಳ ತೀವ್ರ ವಿಚಾರಣೆ ಮುಂದುವರೆಸಿದೆ.

Tags:

error: Content is protected !!