Belagavi

ಬೆಳಗಾವಿ: ರಾಮಕೃಷ್ಣ ಮಿಷನ್ ಆಶ್ರಮದ ರಜತ ಮಹೋತ್ಸವ ಸಂಪನ್ನ; ಆಧ್ಯಾತ್ಮಿಕ ಸೌರಭದ ಸಮಾರೋಪ

Share

1. ರಾಮಕೃಷ್ಣ ಮಿಷನ್ ಆಶ್ರಮದ ರಜತ ಮಹೋತ್ಸವ ಸಂಪನ್ನ
2. ಬೇಲೂರು ಮಠದ ಶ್ರೀ ಮುಕ್ತಿದಾನಂದಜೀ ಪ್ರವಚನ
3. ಹರಿಪಾದ ಮಿತ್ರ ನಿವಾಸದಲ್ಲಿ ಆಧ್ಯಾತ್ಮಿಕ ಗೋಷ್ಠಿ
4. ಪುರಬಯಾನ್ ಚಟರ್ಜಿ ಅವರಿಂದ ಸಿತಾರ್ ವಾದನ

ಸ್ವಾಮಿ ವಿವೇಕಾನಂದರ ಪಾದಸ್ಪರ್ಶದಿಂದ ಪುನೀತವಾದ ಬೆಳಗಾವಿ ಕೋಟೆಯ ರಾಮಕೃಷ್ಣ ಮಿಷನ್ ಆಶ್ರಮವು ಈಗ ಯಶಸ್ವಿ 25 ವರ್ಷಗಳನ್ನು ಪೂರೈಸಿದೆ. ಈ ಸವಿ ನೆನಪಿಗಾಗಿ ಕಳೆದ ಮೂರು ದಿನಗಳಿಂದ ಹಮ್ಮಿಕೊಳ್ಳಲಾಗಿದ್ದ ಬೃಹತ್ ‘ರಜತ ಮಹೋತ್ಸವ’ ಇಂದು ಧಾರ್ಮಿಕ ಹಾಗೂ ಸಾಂಸ್ಕೃತಿಕ ಗರಿಮೆಗಳೊಂದಿಗೆ ಮಂಗಲ ಹಾಡಿತು.
ಮೇ 8 ರಿಂದ 10 ರವರೆಗೆ ನಡೆದ ಈ ಮೂರು ದಿನಗಳ ಸಂಭ್ರಮದಲ್ಲಿ ದೇಶದ ವಿವಿಧ ಭಾಗಗಳ ಗಣ್ಯರು ಹಾಗೂ ಕಲಾವಿದರು ಭಾಗವಹಿಸಿದ್ದರು. ಸಮಾರೋಪ ದಿನವಾದ ಇಂದು ಬೆಲೂರು ಮಠದ ಉಪಾಧ್ಯಕ್ಷರಾದ ಸ್ವಾಮಿ ಸುಹಿತಾನಂದಜಿ ಅವರ ದಿವ್ಯ ಸಾನ್ನಿಧ್ಯದಲ್ಲಿ ವಿಶೇಷ ಕಾರ್ಯಕ್ರಮಗಳು ನಡೆದವು. ಬೆಳಿಗ್ಗೆ ಸ್ವಾಮೀ ಗಿರೀಜಾತ್ಮನಂದ ಮಹಾರಾಜರು ಮತ್ತು ಸ್ವಾಮೀ ಗಭೀರಾತ್ಮಾನಂದಜೀ ಮಹಾರಾಜರ ಉಪಸ್ಥಿತಿಯಲ್ಲಿ ರಾಮಕೃಷ್ಣ ಹೋಮ ಹಾಗೂ ಧಾರ್ಮಿಕ ವಿಧಿವಿಧಾನಗಳು ನೆರವೇರಿದವು. ಸಾರ್ವಜನಿಕ ಸಭೆಯಲ್ಲಿ ಪ್ರವಚನ ನೀಡಿದ ಬೇಲೂರು ರಾಮಕೃಷ್ಣ ಮಠದ ಶ್ರೀ ಮುಕ್ತಿದಾನಂದಜೀ ಮಹಾರಾಜರು, ಸ್ವಾಮಿ ವಿವೇಕಾನಂದರ ತತ್ತ್ವಗಳು ಮತ್ತು ಮನುಷ್ಯನಲ್ಲಿರುವ ಅಂತರ್ನಿಹಿತ ದೈವತ್ವದ ಕುರಿತು ಬೆಳಕು ಚೆಲ್ಲಿದರು. ಅದೇ ರೀತಿ, ತಮಿಳುನಾಡಿನ ಊಟಿ ಶ್ರೀ ರಾಮಕೃಷ್ಣ ಮಠದ ಅಧ್ಯಕ್ಷರಾದ ಸ್ವಾಮೀ ರಾಘವೇಶಾನಂದಜಿ ಮಹಾರಾಜರು, ವಿವೇಕಾನಂದರು ಜಗತ್ತಿಗೆ ನೀಡಿದ ಆಧ್ಯಾತ್ಮಿಕ ಕೊಡುಗೆಗಳನ್ನು ಸ್ಮರಿಸಿದರು. 1892ರಲ್ಲಿ ವಿವೇಕಾನಂದರು ವಾಸ್ತವ್ಯ ಹೂಡಿದ್ದ ಹರಿಪಾದ ಮಿತ್ರ ಅವರ ನಿವಾಸದಲ್ಲಿ ಇಂದು ಈ ಆಶ್ರಮವು ಜ್ಞಾನದೀವಿಗೆಯಾಗಿ ಬೆಳಗುತ್ತಿದೆ.
ಮಧ್ಯಾಹ್ನ ಡಾ. ದತ್ತಾತ್ರೇಯ ವೇಲಣಕರ್ ತಂಡದ ಗೀತ ಗಾಯನ ಹಾಗೂ ಸಂಜೆ ಪಂಡಿತ್ ಪುರಬಯಾನ್ ಚಟರ್ಜಿ ಅವರ ಸಿತಾರ್ ವಾದನವು ಜನಮನ ಗೆದ್ದಿತು. ಆಶ್ರಮದ ಕಾರ್ಯದರ್ಶಿ ಸ್ವಾಮಿ ಆತ್ಮಪ್ರಾಣಾನಂದಜಿ ಅವರ ನೇತೃತ್ವದಲ್ಲಿ ನಡೆದ ಈ ಮಹೋತ್ಸವದಲ್ಲಿ ಬೆಳಗಾವಿಯ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.

Tags:

error: Content is protected !!