• ರೈತರಿಂದಲೇ ರಸ್ತೆ ದುರಸ್ತಿ ಕಾರ್ಯ ಆರಂಭ
• ದೊಡವಾಡ ಗ್ರಾಮದ ರೈತರ ಸ್ವಾವಲಂಬಿ ಹೆಜ್ಜೆ
• ಶಾಸಕ ಮಹಾಂತೇಶ ಕೌಜಲಗಿ ಅವರಿಗೆ ಮನವಿ
• ಹದಗೆಟ್ಟ ರಸ್ತೆಗೆ ಸಿಕ್ಕಿತು ಮುಕ್ತಿ ಭಾಗ್ಯ

ಸರ್ಕಾರದ ಅನುದಾನಕ್ಕಾಗಿ ಕಾಯದೆ, ಹದಗೆಟ್ಟ ರಸ್ತೆಯನ್ನು ರೈತರೇ ಸೇರಿ ಸ್ವಂತ ಖರ್ಚಿನಲ್ಲಿ ದುರಸ್ತಿಗೊಳಿಸಿ ವ್ಯವಸ್ಥೆಯ ಕಣ್ಣು ತೆರೆಸಿದ ಘಟನೆ ಬೈಲಹೊಂಗಲ ತಾಲೂಕಿನ ದೊಡವಾಡ ಗ್ರಾಮದಲ್ಲಿ ನಡೆದಿದೆ. ಸುಮಾರು 1800 ಎಕರೆ ಭೂಮಿಗೆ ಸಂಪರ್ಕ ಕಲ್ಪಿಸುವ ರಸ್ತೆ ಈಗ ರೈತರ ಶ್ರಮದಿಂದ ಹೊಸ ರೂಪ ಪಡೆಯುತ್ತಿದೆ.
ಬೈಲಹೊಂಗಲ ತಾಲೂಕಿನ ದೊಡವಾಡ ಗ್ರಾಮದ ಕರಿನಿಂಗವ್ವನ ಚಕ್ಕಡಿ ಹಾಗೂ ಟ್ರಾಕ್ಟರ್ ರಸ್ತೆ ಕಳೆದ ಹಲವು ವರ್ಷಗಳಿಂದ ಮುಳ್ಳುಕಂಟಿಗಳು ಬೆಳೆದು ಸಂಪೂರ್ಣ ಹಾಳಾಗಿತ್ತು. ಮಳೆಗಾಲ ಬಂತೆಂದರೆ ಈ ರಸ್ತೆಯಲ್ಲಿ ಎತ್ತುಗಳು ಮತ್ತು ಟ್ರಾಕ್ಟರ್‌ಗಳ ಓಡಾಟ ದುಸ್ತರವಾಗುತ್ತಿತ್ತು. ಬಿತ್ತನೆ ಹಾಗೂ ಕಟಾವಿನ ಸಮಯದಲ್ಲಿ ನೂರಾರು ರೈತರು ಅನುಭವಿಸುತ್ತಿದ್ದ ಸಂಕಷ್ಟಕ್ಕೆ ಕೊನೆಹಾಡಲು ನಿರ್ಧರಿಸಿದ ಗ್ರಾಮದ ರೈತರು, ತಮ್ಮತಮ್ಮಲ್ಲೇ ಹಣ ಸಂಗ್ರಹಿಸಿ ಜೆಸಿಬಿ ಮೂಲಕ ರಸ್ತೆ ಸ್ವಚ್ಛತೆ ಹಾಗೂ ದುರಸ್ತಿ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ.
ಸುಮಾರು 1200 ರಿಂದ 1800 ಎಕರೆ ಕೃಷಿ ಭೂಮಿಗೆ ಈ ರಸ್ತೆಯೇ ಪ್ರಮುಖ ಕೊಂಡಿಯಾಗಿದ್ದು, ರೈತರ ಈ ಸ್ವಯಂಪ್ರೇರಿತ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಕೇವಲ ತಾತ್ಕಾಲಿಕ ದುರಸ್ತಿಗೆ ಸೀಮಿತವಾಗದೆ, ಈ ರಸ್ತೆಯನ್ನು ಸಂಪೂರ್ಣವಾಗಿ ಡಾಂಬರೀಕರಣ ಮಾಡಿಕೊಡಬೇಕು ಎಂದು ಸ್ಥಳೀಯ ರೈತರು ಶಾಸಕ ಮಹಾಂತೇಶ ಕೌಜಲಗಿ ಅವರಿಗೆ ಮನವಿ ಸಲ್ಲಿಸಲು ನಿರ್ಧರಿಸಿದ್ದಾರೆ. ಸದ್ಯಕ್ಕೆ ರೈತರೇ ಕೈಜೋಡಿಸಿ ರಸ್ತೆ ಸುಗಮಗೊಳಿಸಿರುವುದು ಇತರ ಗ್ರಾಮಗಳಿಗೆ ಮಾದರಿಯಾಗಿದೆ.

