1. ಸಂತ್ರಸ್ತರು ಅಲೆದಾಡಿದರೆ ಅಧಿಕಾರಿಗಳ ಮೇಲೆ ಕ್ರಮ
2. ಬಿಟಿಡಿಎ ಕಚೇರಿಯಲ್ಲಿ ಬ್ರೋಕರ್‌ಗಳ ಹಾವಳಿಗೆ ಬ್ರೇಕ್
3. ಇ-ಸ್ವತ್ತು ವಿಳಂಬಕ್ಕೆ ಅಧ್ಯಕ್ಷರಿಂದ ಖಡಕ್ ವಾರ್ನಿಂಗ್
4. ಭ್ರಷ್ಟಾಚಾರ ಮುಕ್ತ ಪ್ರಾಧಿಕಾರಕ್ಕೆ ತಪಶೆಟ್ಟಿ ಸಂಕಲ್ಪ

ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದಲ್ಲಿ ಇನ್ನು ಮುಂದೆ ಬ್ರೋಕರ್‌ಗಳ ಆಟ ನಡೆಯಲ್ಲ. ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ನೂತನ ಅಧ್ಯಕ್ಷ ಪ್ರಕಾಶ ತಪಶೆಟ್ಟಿ ಅವರು ಅಧಿಕಾರಿಗಳಿಗೆ ಬೆವರಿಳಿಸಿದ್ದಾರೆ. ಸಂತ್ರಸ್ತರ ಫೈಲ್‌ಗಳು ಧೂಳು ಹಿಡಿದರೆ ಸಹಿಸಲ್ಲ ಎಂಬ ಖಡಕ್ ಸಂದೇಶ ರವಾನಿಸಿದ್ದಾರೆ.
ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಪ್ರಕಾಶ ತಪಶೆಟ್ಟಿ ಅವರು ಮೊದಲ ಸಭೆಯಲ್ಲೇ ಅಧಿಕಾರಿಗಳ ವಿರುದ್ಧ ಕೆಂಡಕಾರಿದ್ದಾರೆ. “ನೀವು ಪತ್ರಿಕೆಗೆ ಹೇಳಿಕೆ ನೀಡುವುದಕ್ಕೆ ಮಾತ್ರ ಸೀಮಿತವಾಗಬೇಡಿ, ಜನರ ಕೆಲಸ ನಿಗದಿತ ಸಮಯದಲ್ಲಿ ನಡೆಯಲಿ” ಎಂದು ಮುಖ್ಯ ಅಭಿಯಂತರಿಗೆ ನೇರವಾಗಿಯೇ ತರಾಟೆಗೆ ತೆಗೆದುಕೊಂಡರು. ಇ-ಸ್ವತ್ತು ಸಮಸ್ಯೆ, ಹಕ್ಕು ಪತ್ರ ವಿತರಣೆ ಮತ್ತು ಬ್ಯಾಂಕ್ ಸಾಲ ಪಡೆಯುವಲ್ಲಿ ಸಂತ್ರಸ್ತರು ಪಡುತ್ತಿರುವ ಹೈರಾಣನ್ನು ಕಂಡು ಅಸಮಾಧಾನ ವ್ಯಕ್ತಪಡಿಸಿದ ಅವರು, ಕಚೇರಿಯಲ್ಲಿ ಮಧ್ಯವರ್ತಿಗಳ ಹಾವಳಿಗೆ ಬ್ರೇಕ್ ಹಾಕುವಂತೆ ಸೂಚಿಸಿದರು. ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ಮಧ್ಯವರ್ತಿಗಳ ಹವಣಿಕೆ ಏಕೆ ಬೇಕು ಎಂದು ಪ್ರಶ್ನಿಸಿದ ಅಧ್ಯಕ್ಷರು, ಇನ್ನು ಮುಂದೆ ಭ್ರಷ್ಟಾಚಾರ ಮುಕ್ತ ಮತ್ತು ಜನಸ್ನೇಹಿ ಬಿಟಿಡಿಎ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

