ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನಲ್ಲಿ ಕುಡಿಯುವ ನೀರಿನ ಆಹಾಕಾರಕ್ಕೆ ಕೊನೆಗೂ ಮುಕ್ತಿ ಸಿಕ್ಕಿದೆ. ಸುದ್ದಿಯ ಬಿತ್ತರದ ಬೆನ್ನಲ್ಲೇ ಎಚ್ಚೆತ್ತ ಅಧಿಕಾರಿಗಳು, ಬತ್ತಿ ಹೋಗಿದ್ದ ಕೃಷ್ಣಾ ನದಿಗೆ ಹಿಪ್ಪರಗಿ ಡ್ಯಾಂನಿಂದ ನೀರು ಹರಿಸಲು ಮುಂದಾಗಿದ್ದಾರೆ.

ಜಮಖಂಡಿ ತಾಲ್ಲೂಕಿನ ಶಿರಗುಪ್ಪಿ, ಮೈಗೂರ, ಕಂಕಣವಾಡಿ ಸೇರಿದಂತೆ ಸುಮಾರು 10 ಗ್ರಾಮಗಳಲ್ಲಿ ಕುಡಿಯುವ ನೀರಿಲ್ಲದೆ ಜನ ಮತ್ತು ಜಾನುವಾರುಗಳು ತತ್ತರಿಸಿ ಹೋಗಿದ್ದವು. ಈ ಬಗ್ಗೆ ವಿಶೇಷ ವರದಿ ಪ್ರಸಾರ ಮಾಡಿ ಸರ್ಕಾರದ ಗಮನ ಸೆಳೆದಿತ್ತು. ಇದರ ಪರಿಣಾಮವಾಗಿ ಅಧಿಕಾರಿಗಳು ಇಂದು ಹಿಪ್ಪರಗಿ ಜಲಾಶಯದಿಂದ 0.10 ಟಿಎಂಸಿ ನೀರನ್ನು ನದಿಗೆ ಹರಿಸಿದ್ದಾರೆ. ಪ್ರಸ್ತುತ ಈ ನೀರು ಕೇವಲ ಕುಡಿಯುವ ಉದ್ದೇಶಕ್ಕಾಗಿ ಮಾತ್ರ ಮೀಸಲಿದ್ದು, ನದಿ ಪಾತ್ರದ ಗ್ರಾಮಸ್ಥರಲ್ಲಿ ಸಮಾಧಾನ ತಂದಿದೆ. ಆದರೆ, ಕೃಷಿ ಚಟುವಟಿಕೆಗಳಿಗೂ ಅನುಕೂಲವಾಗುವಂತೆ ಇನ್ನೂ ಹೆಚ್ಚಿನ ಪ್ರಮಾಣದ ನೀರನ್ನು ಬಿಡುಗಡೆ ಮಾಡಬೇಕು ಎಂಬುದು ಈ ಭಾಗದ ರೈತರ ಒತ್ತಾಯವಾಗಿದೆ.

