bagalkot

19ರ ಹರೆಯದ ಯುವಕನ ಅಪ್ರತಿಮ ಸಾಹಸ: 105 ಕೆಜಿ ತೂಕದ ಚೀಲ ಹೊತ್ತು ದೀಡ್ ನಮಸ್ಕಾರ!

Share

• 105 ಕೆಜಿ ತೂಕ ಹೊತ್ತು ದೀಡ್ ನಮಸ್ಕಾರ
• 19ರ ಯುವಕ ಬಾಲರಾಜ್ ಕುರಿ ಸಾಹಸ
• ಮಾರುತೇಶ್ವರ ಜಾತ್ರೆಯಲ್ಲಿ ಭಕ್ತಿ-ಶಕ್ತಿಯ ಸಂಗಮ
• ಸಾಹಸಿ ಯುವಕನಿಗೆ ಗ್ರಾಮಸ್ಥರಿಂದ ಭವ್ಯ ಮೆರವಣಿಗೆ

ತನ್ನ ದೇಹದ ತೂಕಕ್ಕಿಂತ ಎರಡು ಪಟ್ಟು ಹೆಚ್ಚು ಭಾರವನ್ನು ಬೆನ್ನ ಮೇಲೆ ಹೊತ್ತು ಭಕ್ತಿಯ ಪರಾಕಾಷ್ಠೆ ಮೆರೆದಿದ್ದಾನೆ ಬಾಗಲಕೋಟೆಯ ಒಬ್ಬ ಯುವಕ. ಉರಿ ಬಿಸಿಲನ್ನೂ ಲೆಕ್ಕಿಸದೆ ಈತ ಮಾಡಿದ ‘ದೀಡ್ ನಮಸ್ಕಾರ’ದ ಸಾಹಸ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ.
ಬಾಗಲಕೋಟೆ ಜಿಲ್ಲೆ ಇಳಕಲ್ ತಾಲೂಕಿನ ಗೋನಾಳ್ ಎಸ್‌ಟಿ ಗ್ರಾಮದಲ್ಲಿ ನಡೆದ ಮಾರುತೇಶ್ವರ ಹಾಗೂ ಬಸವೇಶ್ವರ ಜಾತ್ರೆಯಲ್ಲಿ ಜನ ಬೆಚ್ಚಿಬೀಳುವಂತಹ ಸಾಹಸವೊಂದು ನಡೆದಿದೆ. ಕೇವಲ 47 ಕೆಜಿ ತೂಕವಿರುವ ಬಾಲರಾಜ್ ಹನಮಂತ ಕುರಿ ಎಂಬ 19 ವರ್ಷದ ಯುವಕ, ಬರೋಬ್ಬರಿ 105 ಕೆಜಿ ತೂಕದ ಜೋಳದ ಚೀಲವನ್ನು ಬೆನ್ನ ಮೇಲೆ ಹೊತ್ತುಕೊಂಡು ಇಡೀ ದೇವಸ್ಥಾನದ ಆವರಣದಲ್ಲಿ ದೀಡ್ ನಮಸ್ಕಾರ ಹಾಕಿದ್ದಾನೆ. ತನ್ನ ಆರಾಧ್ಯ ದೈವ ಹನುಮಂತನ ಮೇಲಿರುವ ಭಕ್ತಿ ಹಾಗೂ ಗ್ರಾಮದ ಒಳಿತಿಗಾಗಿ ತಾನು ಹೊತ್ತಿದ್ದ ಸಂಕಲ್ಪವನ್ನು ಈ ಮೂಲಕ ಈಡೇರಿಸಿದ್ದಾನೆ. ಉರಿ ಬಿಸಿಲಿನ ನಡುವೆಯೂ ಬಾಲರಾಜ್ ತೋರಿದ ಈ ಅಪ್ರತಿಮ ಶೌರ್ಯಕ್ಕೆ ಇಡೀ ಗ್ರಾಮವೇ ಸಾಕ್ಷಿಯಾಯಿತು.
ಯುವಕನ ಈ ಸಾಹಸವನ್ನು ಕಂಡು ಬೆರಗಾದ ಭಕ್ತರು ಮತ್ತು ಗ್ರಾಮಸ್ಥರು ಚಪ್ಪಾಳೆ, ಸಿಳ್ಳೆಗಳ ಮೂಲಕ ಪ್ರೋತ್ಸಾಹ ನೀಡಿದರು. ಬಾಲರಾಜ್‌ನ ಸಂಕಲ್ಪ ಪೂರ್ಣಗೊಳ್ಳುತ್ತಿದ್ದಂತೆಯೇ ಗ್ರಾಮದ ಮಹಿಳೆಯರು ಆರತಿ ಬೆಳಗಿ ಹಾರ ಹಾಕಿ ಗೌರವಿಸಿದರು. ಅಷ್ಟೇ ಅಲ್ಲದೆ, ಯುವಕನ ಶಕ್ತಿಯನ್ನು ಮೆಚ್ಚಿದ ಗ್ರಾಮಸ್ಥರು ಆತನನ್ನು ಹೆಗಲ ಮೇಲೆ ಹೊತ್ತು ಇಡೀ ಊರಿನ ತುಂಬೆಲ್ಲಾ ಅದ್ಧೂರಿ ಮೆರವಣಿಗೆ ಮಾಡಿ ಸಂಭ್ರಮಿಸಿದರು. ಸಣ್ಣ ವಯಸ್ಸಿನಲ್ಲಿಯೇ ಇಂತಹ ಕಠಿಣ ಸಾಹಸ ಮಾಡಿದ ಬಾಲರಾಜ್ ಈಗ ಇಡೀ ನಾಡಿನಾದ್ಯಂತ ಸುದ್ದಿಯಾಗಿದ್ದಾನೆ.

Tags:

error: Content is protected !!