ರಾಬರಿ ಪ್ರಕರಣದ ಆರೋಪಿಯನ್ನು ಸ್ಥಳ ಮಹಜರಿಗೆ ಕರೆದೊಯ್ದಿದ್ದ ಬೆಳಗಾವಿ ಪೊಲೀಸರಿಗೆ ಕೊಲ್ಹಾಪುರದಲ್ಲಿ ಅನಿರೀಕ್ಷಿತ ಶಾಕ್ ಎದುರಾಗಿದೆ. ಕಳ್ಳನ ಸಂಬಂಧಿಕರು ಹಾಗೂ ಸ್ಥಳೀಯರು ಸೇರಿ ಪೊಲೀಸರ ಮೇಲೆ ಹಲ್ಲೆಗೆ ಮುಂದಾದ ಬೆನ್ನಲ್ಲೇ, ಪೊಲೀಸರು ಪ್ರಾಣಾಪಾಯದಿಂದ ಕೂದಲೆಳೆತದ ಅಂತರದಲ್ಲಿ ಪಾರಾಗಿ ಬಂದಿದ್ದಾರೆ.

ಸದಲಗಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ರಾಬರಿ ಪ್ರಕರಣದ ಆರೋಪಿಗಳಾದ ಧೀರಜ್ ವಾಳವಾಳ್ಕರ್ ಮತ್ತು ರವಿ ಸೊನಾರ್ ಎಂಬುವವರನ್ನು ಬಂಧಿಸಿದ್ದ ಚಿಕ್ಕೋಡಿ ಪೊಲೀಸರು, ಸ್ಥಳ ಮಹಜರಿಗಾಗಿ ಮಹಾರಾಷ್ಟ್ರದ ಕೊಲ್ಲಾಪುರದ ಛತ್ರಪತಿ ಶಿವಾಜಿ ನಗರಕ್ಕೆ ಕರೆದೊಯ್ದಿದ್ದರು. ಈ ವೇಳೆ ಆರೋಪಿಯು ತಾನು ನಿರಪರಾಧಿ ಎಂದು ಕೂಗಾಡುತ್ತಾ ಹೈಡ್ರಾಮಾ ಶುರು ಮಾಡಿದ್ದಾನೆ. ಇದನ್ನು ಕಂಡ ಆರೋಪಿಯ ಸಂಬಂಧಿಕರು ಹಾಗೂ ಸ್ನೇಹಿತರು ಒಟ್ಟಾಗಿ ಸೇರಿ ಚಿಕ್ಕೋಡಿ ಸಿಪಿಐ ವಿಶ್ವನಾಥ ಚೌಗಲಾ ಮತ್ತು ಸಿಬ್ಬಂದಿಗಳ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಪೊಲೀಸರನ್ನು ನಕಲಿ ಎಂದು ಬಿಂಬಿಸಿ ಇಡೀ ಕಾಲೋನಿ ಜನರನ್ನು ಎತ್ತಿಕಟ್ಟುವ ಮೂಲಕ ಅಲ್ಲಿ ಯುದ್ಧದ ವಾತಾವರಣ ನಿರ್ಮಾಣ ಮಾಡಲಾಗಿತ್ತು.

ಪರಿಸ್ಥಿತಿ ಕೈಮೀರುತ್ತಿದ್ದಂತೆ ಬೆಳಗಾವಿ ಎಸ್ಪಿಯವರಿಗೆ ಕರೆ ಮಾಡಿದರೂ ಸರಿಯಾದ ಸ್ಪಂದನೆ ಸಿಗದ ಕಾರಣ, ಚಿಕ್ಕೋಡಿ ಪೊಲೀಸರು ತಕ್ಷಣವೇ ಸ್ಥಳೀಯ ಮಹಾರಾಷ್ಟ್ರ ಪೊಲೀಸರ ಮೊರೆ ಹೋಗಿದ್ದಾರೆ. ಸ್ಥಳೀಯ ಪೊಲೀಸರ ಭದ್ರತೆಯೊಂದಿಗೆ ಹೇಗೋ ಮಾಡಿ ಆರೋಪಿಯನ್ನು ವಾಪಸ್ ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ. ಕರ್ತವ್ಯಕ್ಕೆ ಅಡ್ಡಿಪಡಿಸಿ, ಹಲ್ಲೆಗೆ ಮುಂದಾದ ಆರೋಪಿಯ ಕುಟುಂಬಸ್ಥರ ನಡೆ ಈಗ ಪೊಲೀಸ್ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಸದ್ಯ ಪ್ರಾಣಾಪಾಯದಿಂದ ಪಾರಾಗಿ ಬಂದಿರುವ ಪೊಲೀಸರು ಆರೋಪಿಗಳನ್ನು ವಾಪಸ್ ಕರೆತಂದು ಕಾನೂನು ಪ್ರಕ್ರಿಯೆ ಮುಂದುವರಿಸಿದ್ದಾರೆ.
