ಖಾನಾಪುರದ ಹೃದಯಭಾಗದಲ್ಲಿರುವ ಲೋಕೋಪಯೋಗಿ ಇಲಾಖೆಯ ಪ್ರವಾಸಿ ಮಂದಿರ (IB) ತನ್ನ ಹಳೆಯ ವೈಭವವನ್ನು ಕಳೆದುಕೊಂಡು ಈಗ ಕುಡುಕರ ಅಡ್ಡೆಯಾಗಿ ಬದಲಾಗಿದೆ. ಗಣ್ಯಾತಿಗಣ್ಯರು, ಅಧಿಕಾರಿಗಳು ವಾಸ್ತವ್ಯ ಹೂಡುವ ಈ ವಿಶಾಲ ಕಟ್ಟಡದ ಆವರಣದಲ್ಲಿ ಸ್ವಚ್ಛತೆ ಮಾಯವಾಗಿದ್ದು, ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಪರಿಸರ ಪ್ರೇಮಿಗಳು ಈಗ ರೊಚ್ಚಿಗೆದ್ದಿದ್ದಾರೆ.


ಒಂದೆಡೆ ಹಚ್ಚ ಹಸಿರಿನಿಂದ ಕಂಗೊಳಿಸಬೇಕಿದ್ದ ಐಬಿ ಆವರಣದಲ್ಲಿ ಈಗ ಕೇವಲ ಒಣಗಿದ ಗಿಡಗಳು ಮತ್ತು ಕಸದ ರಾಶಿಯೇ ಕಾಣಿಸುತ್ತಿದೆ. ಶೋಭೆ ತರಬೇಕಿದ್ದ ಉದ್ಯಾನವನದಲ್ಲಿ ಪಾನ ಪರಾಗ್ ಚೀಟಿಗಳು, ಪ್ಲಾಸ್ಟಿಕ್ ಬಾಟಲಿಗಳು ಮತ್ತು ಬಿಯರ್-ವಿಸ್ಕಿ ಬಾಟಲಿಗಳನ್ನು ಬೇಕಾಬಿಟ್ಟಿಯಾಗಿ ಒಡೆದು ಹಾಕಲಾಗಿದೆ. ಕಟ್ಟಡದ ಮೂಲೆ ಮೂಲೆಗಳಲ್ಲೂ ಸ್ವಚ್ಛತೆ ಎಂಬುದು ಮರೀಚಿಕೆಯಾಗಿದ್ದು, ಪ್ರವಾಸಿ ಮಂದಿರಕ್ಕೆ ಬರುವ ಜನ “ಅಯ್ಯೋ” ಎನ್ನುವಂತಹ ಪರಿಸಿತಿ ನಿರ್ಮಾಣವಾಗಿದೆ. ಈ ಅರಾಜಕತೆ ನಡೆಯುತ್ತಿರುವುದು ಬೇರೆಲ್ಲೂ ಅಲ್ಲ, ಸಾಕ್ಷಾತ್ ಲೋಕೋಪಯೋಗಿ ಇಲಾಖೆಯ ಅಭಿಯಂತರ ಕಚೇರಿಯ ಪಕ್ಕದಲ್ಲೇ ಎಂಬುದು ದುರಂತ.

ಈ ಸಂಪೂರ್ಣ ಅವ್ಯವಸ್ಥೆಗೆ ಇಲಾಖೆಯ ಅಭಿಯಂತರರಾದ ಸಂಜಯ್ ಗಸ್ತಿ ಅವರ ನಿರ್ಲಕ್ಷ್ಯವೇ ಕಾರಣ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಕಚೇರಿ ಕಣ್ಣೆದುರೇ ಇದ್ದರೂ ಸ್ವಚ್ಛತೆಯ ಕಡೆಗೆ ಗಮನ ಹರಿಸದ ಅಧಿಕಾರಿಗಳ ಧೋರಣೆಯನ್ನು ಪರಿಸರ ಪ್ರೇಮಿಗಳು ಖಂಡಿಸಿದ್ದಾರೆ. ಕೂಡಲೇ ಈ ಐಬಿಯ ಸುತ್ತಲಿನ ಗಲೀಜನ್ನು ಮುಕ್ತಗೊಳಿಸಿ, ಹಸಿರು ಪರಿಸರವನ್ನು ಪುನಃ ನಿರ್ಮಾಣ ಮಾಡದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಸ್ಥಳೀಯರು ಎಚ್ಚರಿಕೆ ನೀಡಿದ್ದಾರೆ. ಖಾನಾಪುರದ ವೈಭವದ ಸಂಕೇತವಾಗಿರುವ ಈ ಐಬಿಯನ್ನು ರಕ್ಷಿಸುವವರು ಯಾರು ಎಂಬ ಪ್ರಶ್ನೆ ಈಗ ಸಾರ್ವಜನಿಕ ವಲಯದಲ್ಲಿ ಬಲವಾಗಿ ಕೇಳಿಬರುತ್ತಿದೆ.
