ಅಪಘಾತವಾದಾಗ ಜೀವ ಉಳಿಸಬೇಕಾದ ಅಂಬ್ಯುಲೆನ್ಸ್ ಒಂದು ಗಂಟೆ ತಡವಾಗಿ ಬಂದರೆ ಆ ನೋವು ಹೇಗಿರುತ್ತೆ? ಖಾನಾಪುರದ ಹೊಸ ಬ್ರಿಜ್ ಸಮೀಪ ಬೈಕ್ ಸ್ಕಿಡ್ ಆಗಿ ಗಂಭೀರವಾಗಿ ಗಾಯಗೊಂಡಿದ್ದ ದಂಪತಿಗಳ ನೆರವಿಗೆ ಪಂಚ ಗ್ಯಾರಂಟಿ ಪ್ರಾಧಿಕಾರದ ಸದಸ್ಯ ಬಾಬು ಹತ್ತರವಾಡ ಧಾವಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಚಂದಗಡದಿಂದ ಅಳ್ನಾವರದ ಕಡೆಗೆ ದಂಪತಿಗಳು ಪ್ರಯಾಣಿಸುತ್ತಿದ್ದ ವೇಳೆ, ಖಾನಾಪುರದ ಹೊಸ ಬ್ರಿಜ್ ಬಳಿ ಬೈಕ್ ಟೈರ್ ಪಂಚರ್ ಆಗಿ ಸ್ಕಿಡ್ ಆಗಿದೆ. ಈ ಭೀಕರ ಅಪಘಾತದಲ್ಲಿ ಹಿಂಬದಿ ಸವಾರೆಗೆ ತಲೆಗೆ ಗಂಭೀರ ಗಾಯಗಳಾಗಿ ದಂಪತಿಗಳು ರಸ್ತೆಯಲ್ಲೇ ಅಸಹಾಯಕರಾಗಿ ಬಿದ್ದಿದ್ದರು. ಘಟನೆ ನಡೆದು ಒಂದು ಗಂಟೆಯಾದರೂ ಅಂಬ್ಯುಲೆನ್ಸ್ ಸ್ಥಳಕ್ಕೆ ಬಾರದಿದ್ದಾಗ ಸಾರ್ವಜನಿಕರಲ್ಲಿ ಭಾರೀ ಆಕ್ರೋಶ ವ್ಯಕ್ತವಾಯಿತು. ಇದೇ ಮಾರ್ಗವಾಗಿ ತೆರಳುತ್ತಿದ್ದ ಖಾನಾಪುರ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಸದಸ್ಯ ಬಾಬು ಹತ್ತರವಾಡ ಅವರು ಕೂಡಲೇ ಕಾರ್ಯಪ್ರವೃತ್ತರಾಗಿ, ಗಾಯಾಳುಗಳನ್ನು ಅಂಬ್ಯುಲೆನ್ಸ್ ಮೂಲಕ ಖಾನಾಪುರ ಆಸ್ಪತ್ರೆಗೆ ರವಾನಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.
