ಕಳೆದ ವರ್ಷ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕಳಪೆ ಪ್ರದರ್ಶನ ನೀಡಿ ಟೀಕೆಗೆ ಗುರಿಯಾಗಿದ್ದ ವಿಜಯಪುರ ಜಿಲ್ಲೆ, ಈ ಬಾರಿ ಗಣನೀಯ ಸುಧಾರಣೆ ಸಾಧಿಸಿ ಗಮನ ಸೆಳೆದಿದೆ. 2024-25ನೇ ಸಾಲಿನಲ್ಲಿ ಕೇವಲ 78 ಶೇಕಡಾ ಫಲಿತಾಂಶ ದಾಖಲಿಸಿದ್ದ ಜಿಲ್ಲೆ, ಇದೀಗ ಶೇಕಡಾ 94ರಷ್ಟು ಫಲಿತಾಂಶದೊಂದಿಗೆ ಉತ್ತಮ ಸಾಧನೆ ಮಾಡಿದೆ. ಈ ಕುರಿತು ಇಲ್ಲಿದೆ ಡಿಟೇಲ್ಸ್…


ವಿಜಯಪುರ ಜಿಲ್ಲೆಉ ಕಳೆದ ವರ್ಷದ ಹಿನ್ನಡೆಯ ನಂತರ ಶಿಕ್ಷಣ ಇಲಾಖೆ ವ್ಯಾಪಕ ಕ್ರಮಗಳನ್ನು ಕೈಗೊಂಡಿದ್ದು, ಜಿಲ್ಲೆಯಾದ್ಯಂತ ವಿಶೇಷ ಅಭಿಯಾನ ರೂಪದಲ್ಲಿ ವಿದ್ಯಾರ್ಥಿಗಳ ಮೇಲ್ವಿಚಾರಣೆ ಮತ್ತು ಮಾರ್ಗದರ್ಶನ ನಡೆಸಲಾಗಿದೆ. ಸಿಂದಗಿ, ಬಸವನ ಬಾಗೇವಾಡಿ, ಚಡಚಣ ಹಾಗೂ ದೇವರ ಹಿಪ್ಪರಗಿ ಭಾಗಗಳಲ್ಲಿ ಬಿಇಓಗಳು ಜಾಗೃತಿ ಮೂಡಿಸಲು ಡಂಗೂರ ಸಾರಿದ್ದು ಗಮನಾರ್ಹವಾಗಿದೆ.

ಇನ್ನೂ ಗ್ರಾಮೀಣ ಪ್ರದೇಶಗಳಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿರುವ ಮನೆಗಳಲ್ಲಿ ಸಂಜೆ ವೇಳೆಯಲ್ಲಿ ಟಿವಿ ಹಾಗೂ ಮೊಬೈಲ್ ಬಳಕೆ ನಿಯಂತ್ರಿಸಲು ಸೂಚನೆ ನೀಡಲಾಗಿತ್ತು. ಶಿಕ್ಷಕರು ನಸುಕಿನ ಜಾವವೇ ವಿದ್ಯಾರ್ಥಿಗಳಿಗೆ ಕರೆ ಮಾಡಿ ಓದಿನ ಪ್ರಗತಿ ಪರಿಶೀಲಿಸುತ್ತಿದ್ದರು. ಶಾಲೆಗೆ ಗೈರುಹಾಜರಾಗುತ್ತಿದ್ದ ವಿದ್ಯಾರ್ಥಿಗಳನ್ನು ಮನೆಗಳಿಂದ ಕರೆತಂದು ತರಗತಿಗಳಿಗೆ ಹಾಜರುಪಡಿಸಲಾಗುತ್ತಿತ್ತು. ಅಲ್ಲದೆ ಕೆಲವು ಶಾಲೆಗಳಲ್ಲಿ ಭಾನುವಾರವೂ ತರಗತಿಗಳನ್ನು ನಡೆಸಿ ಹೆಚ್ಚುವರಿ ಬೋಧನೆ ನೀಡಲಾಗಿತ್ತು. ಈ ಕ್ರಮಗಳಿಂದ ವಿದ್ಯಾರ್ಥಿಗಳಲ್ಲಿ ಓದಿನ ಮೇಲೆ ಹೆಚ್ಚಿನ ಗಮನ ಕೇಂದ್ರೀಕೃತವಾಗಿದ್ದು, ಜಿಲ್ಲೆಯ ಒಟ್ಟು ಫಲಿತಾಂಶದಲ್ಲಿ ಮಹತ್ತರ ಏರಿಕೆ ಕಂಡು ಬಂದಿದೆ.
ಒಟ್ಟಾರೆ, ಸಮಗ್ರ ಯೋಜನೆ ಮತ್ತು ನಿರಂತರ ಪರಿಶ್ರಮದ ಫಲವಾಗಿ ವಿಜಯಪುರ ಜಿಲ್ಲೆ ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ದಾಖಲಿಸಿದ್ದು, ಶಿಕ್ಷಣ ಇಲಾಖೆಯ ಪ್ರಯತ್ನಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.
