State

ದಲಿತ ಸಮುದಾಯಕ್ಕೆ ರಾಜ್ಯ ಸರ್ಕಾರದ ಐತಿಹಾಸಿಕ ಕೊಡುಗೆ: ಒಳ ಮೀಸಲಾತಿ ಜಾರಿಗೆ ಸಿಎಂ ಸಿದ್ದರಾಮಯ್ಯ ಸಂಪುಟ ಗ್ರೀನ್ ಸಿಗ್ನಲ್!

Share

ಒಳ ಮೀಸಲಾತಿ ಗೊಂದಲಕ್ಕೆ ಕೊನೆಗೂ ರಾಜ್ಯ ಸರ್ಕಾರ ತೆರೆ ಎಳೆದಿದೆ. ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಶುಕ್ರವಾರ ನಡೆದ ವಿಶೇಷ ಸಂಪುಟ ಸಭೆಯಲ್ಲಿ ಒಳ ಮೀಸಲಾತಿ ಬಗ್ಗೆ ಮಹತ್ವದ ತೀರ್ಮಾನ ಕೈಗೊಂಡಿದೆ.ಶೇ.15 ಮೀಸಲಾತಿಯಲ್ಲೇ ವರ್ಗೀಕರಣಕ್ಕೆ ಸರ್ಕಾರ ತೀರ್ಮಾನ ಮಾಡಿದ್ದು, ಅದರಂತೆ ಎಡಗೈ ಸಮುದಾಯ ಶೇ. 5.25, ಬಲಗೈ ಸಮುದಾಯ ಶೇ. 5.25 ಹಾಗೂ ಇತರ ಪರಿಶಿಷ್ಟ ಜಾತಿಗಳಿಗೆ ಶೇ. 4.5 ಒಳ ಮೀಸಲಾತಿ ಹಂಚಿಕೆ ಮಾಡಲು ಸರ್ಕಾರ ನಿರ್ಧರಿಸಿದೆ.

ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ. ಒಳಮೀಸಲಾತಿಗೆ ಸಚಿವ ಸಂಪುಟ ಸಭೆಯಲ್ಲಿ ಸರ್ವಾನುಮತದಿಂದ ಒಪ್ಪಿಕೊಳ್ಳಲಾಗಿದೆ. ನ್ಯಾಯಾಲಯದ ಮುಂದಿನ ಆದೇಶದವರೆಗೆ ಇದೇ ಅಂತಿಮವಾಗಿರಲಿದೆ. 56,432 ಹುದ್ದೆ ಭರ್ತಿ ಮಾಡಲು ಘೋಷಿಸಿದ್ದೆವು. ಒಳ ಮೀಸಲಾತಿಯಂತೆ ನೇಮಕಾತಿ ನಡೆಸಲು ಹುದ್ದೆಗಳಿಗೆ ಮತ್ತೊಮ್ಮೆ ಅಧಿಸೂಚನೆ ಹೊರಡಿಸಲಾಗುವುದು ಎಂದು ತಿಳಿಸಿದರು.
ಖಾಲಿ ಇರುವ ಹುದ್ದೆಗಳನ್ನ ಹಂತ ಹಂತವಾಗಿ ಭರ್ತಿ ಮಾಡುತ್ತೇವೆ. ಈಗಾಗಲೇ ಪ್ರಕ್ರಿಯೆ ಆರಂಭವಾಗಿದೆ. ಈಗ ಒಳಮೀಸಲಾತಿ ನಿರ್ಧಾರ ಆಗಿದೆ, ಇನ್ನು ನೇಮಕಾತಿ ಶುರು ಮಾಡುತ್ತೇವೆ. ನಮ್ಮ ಪಕ್ಷದ ನಿಲುವು ಸಮಬಾಳು-ಸಮಪಾಲು. ಯಾರಿಗೂ ಅನ್ಯಾಯವಾಗಬಾರದು ಎಂಬುವುದು ನಮ್ಮ ನಿಲುವು. ನಾವು ಕೊಟ್ಟ ಮಾತು ಉಳಿಸಿಕೊಂಡಿದ್ದೇವೆ. ಎಲ್ಲ ದಲಿತ ಸಂಘಟನೆಗಳು ಒಪ್ಪಿಕೊಳ್ಳುತ್ತವೆ ಎಂಬ ವಿಶ್ವಾಸವಿದೆ. ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿದರು.

ಈ ಮೊದಲು ಒಳಮೀಸಲಾತಿ ಪ್ರಮಾಣ 6, 6, 5 ಎಂದು ವರ್ಗೀಕರಣ ಮಾಡಿದ್ದೆವು. ನಂತರ ರೋಸ್ಟರ್ ಬಿಂದುವಿನಲ್ಲಿ ಗೊಂದಲ ಉಂಟಾಯಿತು. ನಂತರ ಅಲೆಮಾರಿ ಸಮುದಾಯ ನ್ಯಾಯಾಲಯದ ಮೊರೆ ಹೋದರು. ಮೀಸಲಾತಿ ಪ್ರಮಾಣ ಶೇ.50 ಮೀರಬಾರದೆಂದು ಕೋರ್ಟ್ ಆದೇಶಿಸಿತ್ತು. ಇಂದ್ರ ಸಾಹ್ನಿ ಕೇಸ್ನಲ್ಲಿ ಮೀಸಲಾತಿ ಪ್ರಮಾಣ ಶೇ. 50 ಆದೇಶವಿತ್ತು. ಎಸ್‌ಸಿ ಮೀಸಲಾತಿ ಪ್ರಮಾಣ ಶೇ.17 ಅನ್ವಯ ನಾವು ಪ್ರವರ್ಗ ಎಡಗೈ-6, ಬಲಗೈ-6, ಇತರೆ-5 ಎಂದು ವರ್ಗೀಕರಣ ಮಾಡಿದ್ದೆವು. ಆದರೆ ಕೋರ್ಟ್ ಮೀಸಲಾತಿ ಪ್ರಮಾಣ ಶೇ.50 ಮೀರುವಂತಿಲ್ಲ. ಈಗ ಒಳಮೀಸಲಾತಿ ಬಗ್ಗೆ ಮಹತ್ವದ ತೀರ್ಮಾನ ಮಾಡಲಾಗಿದೆ ಎಂದು ತಿಳಿಸಿದರು.

Tags:

error: Content is protected !!