ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಬಿಜೆಪಿಯಿಂದ ಉಚ್ಚಾಟನೆಯಾಗಿ 13 ತಿಂಗಳು ಗತಿಸಿವೆ. ಶಾಸಕ ಯತ್ನಾಳರನ್ನು ಬಿಜೆಪಿ ಪಕ್ಷಕ್ಕೆ ಮರಳಿ ತೆಗೆದುಕೊಳ್ಳುವ ಒತ್ತಡ ಇದ್ದೆ ಇದೆ. ಆದ್ರೆ ಬಿಜೆಪಿ ಹೈಕಮಾಂಡ್ ಮೌನಕ್ಕೆ ಶರಣಾಗಿದೆ. ಆದ್ರೆ ಇತ್ತ ಯತ್ನಾಳ ಹೊಸ ಪಕ್ಷದ ಘೋಷಣೆ ಮಾಡುವ ನಿರ್ಧಾರ ಪ್ರಕಟಿಸಿದ್ದಾರೆ. ಈ ಪ್ರಕಟಣೆ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ. ಹಾಗಾದರೆ ಯತ್ನಾಳ ಹೊಸ ಪಕ್ಷಕ್ಕೆ ಸೇರ್ಪಡೆಗೊಳ್ಳುವ ನಾಯಕರು ಯಾರು? ಪಕ್ಷದ ಸಿದ್ಧಾಂತಗಳ ಕುರಿತು ಚರ್ಚೆ ಶುರುವಾಗಿವೆ.ಇಲ್ಲಿದೆ ಈ ಕುರಿತು ಒಂದು ವರದಿ…

ಹೌದು ಬಿಜೆಪಿ ಉಚ್ಚಾಟಿತ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಪ್ರಾದೇಶಿಕ ಪಕ್ಷದ ಸ್ಥಾಪನೆಯ ಮಂತ್ರ ಜಪಿಸಿದ್ದಾರೆ. ಬಸವ ಜಯಂತಿಯ ಶುಭ ಸಂದರ್ಭದಲ್ಲಿಯೇ ಮುಂದಿನ ತಿಂಗಳು ಒಳ್ಳೆಯ ಮುಹೂರ್ತ ನೋಡಿಕೊಂಡು ಹೊಸ ರಾಜಕೀಯ ಪಕ್ಷ ಸ್ಥಾಪನೆ ಮಾಡುತ್ತೇನೆ ಎಂದಿದ್ದಾರೆ. ಮುಂದಿನ ತಿಂಗಳು ಒಳ್ಳೆಯ ಮುಹೂರ್ತ ನೋಡಿಕೊಂಡು ಜೆಸಿಬಿ ಪಕ್ಷ ಸ್ಥಾಪನೆ ಮಾಡುತ್ತೇನೆ. ಜಿಲ್ಲಾವಾರು ಹಿಂದುತ್ವದ ಸಭೆ ಮಾಡುತ್ತೇನೆ. ಕೋಲಾರ ಜಿಲ್ಲೆಯ ಐತಿಹಾಸಿಕ ವಿಘ್ನೇಶ್ವರ ದೇವಸ್ಥಾನದಿಂದ ಸಭೆ ಪ್ರಾರಂಭ ಮಾಡುತ್ತೇನೆ ಎಂದು ಹೇಳಿದ್ದಾರೆ. ತಮ್ಮ ಪಕ್ಷದಲ್ಲಿ ಹಿಂದುತ್ವ, ನಿರುದ್ಯೋಗ, ಅಭಿವೃದ್ಧಿ ಮೂರು ಉದ್ದೇಶಗಳೊಂದಿಗೆ ಸಭೆ ಮಾಡುತ್ತೇನೆ. ಮುಂದಿನ ದಿನಗಳಲ್ಲಿ ಪ್ರಾದೇಶಿಕ ಪಕ್ಷ ಕಟ್ಟುವ ಬಗ್ಗೆ ಜನರ ಅಭಿಪ್ರಾಯ ಪಡೆಯುತ್ತೇನೆ. ಪ್ರಾದೇಶಿಕ ಪಕ್ಷ ಕಟ್ಟುವ ಚಿಂತನೆ ಪ್ರಾರಂಭವಾಗಿದೆ. ಮೇ ತಿಂಗಳಲ್ಲಿ ಒಳ್ಳೆಯ ಮುಹೂರ್ತ ನೋಡಿ ರಾಜ್ಯಾದ್ಯಂತ ಪ್ರವಾಸ ಮಾಡುವದಾಗಿ ಹೇಳಿದ್ದಾರೆ.
ಇನ್ನೂ ತಾವು ರಾಜ್ಯದಲ್ಲಿ ಪ್ರವಾಸ ಮಾಡುವದಾಗಿ ತಿಳಿಸಿರುವ ಯತ್ನಾಳರು ಜಿಲ್ಲಾ ಕೇಂದ್ರ ನಂತರ ತಾಲೂಕು ಕೇಂದ್ರಗಳಿಗೆ ಹೋಗುತ್ತೇನೆ. ಹಿಂದೂಪರ ಚಿಂತನೆ ಉಳ್ಳ ನಿರುದ್ಯೋಗಿ ಯುವಕರನ್ನು, ಅಭಿವೃದ್ಧಿ ಚಿಂತನೆ ಪರ ಇರುವ ಜನರ ಸಭೆ ಮಾಡುತ್ತೇನೆ. ಜನರ ಅಭಿಪ್ರಾಯ ಪಡೆದು ಮುಂದೆ ಪ್ರಾದೇಶಿಕ ಪಕ್ಷ ಕಟ್ಟುವ ಬಗ್ಗೆ ಚಿಂತನೆ ಮಾಡುತ್ತೇನೆ. ಚುನಾವಣೆ ಆಯೋಗ ನನ್ನ ಪಕ್ಷಕ್ಕೆ ಯಾವ ಗುರುತು ನೀಡುತ್ತದೆ ಎಂದು ನೋಡಬೇಕಿದೆ ಎಂದಿದ್ದಾರೆ. ಸದ್ಯ ಯತ್ನಾಳ ರ ಈ ನಿರ್ಧಾರದ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. ಮುಂದಿನ ದಿನಗಳಲ್ಲಿ ರಾಜಕೀಯ ಸಮೀಕರಣಗಳು ಹೇಗೆ ಬದಲಾಗುತ್ತವೆ ಎಂಬುದು ಕುತೂಹಲ ಮೂಡಿಸಿದೆ. ಯತ್ನಾಳರ ಹಿಂದೆ ಯಾವ ಯಾವ ನಾಯಕರು ಹೋಗುತ್ತಾರೆ ಎಂಬ ವಿಷಯದಲ್ಲಿ ಚರ್ಚೆ ಜೋರಾಗಿ ನಡೆದಿದೆ.
ಒಟ್ಟಾರೆ ಶಾಸಕ ಯತ್ನಾಳರ ಈ ನಡೆ ತೀವ್ರ ಕುತೂಹಲ ಮೂಡಿಸಿದೆ. ಹೊಸ ಪಕ್ಷ ಯಾವ ಉದ್ದೇಶದಿಂದ ಬರುತ್ತದೆ? ಯಾರು ಯಾರು ಸೇರುತ್ತಾರೆ? ಇದು ಕರ್ನಾಟಕ ರಾಜಕೀಯದ ಮೇಲೆ ಯಾವ ಮಟ್ಟಿಗೆ ಪರಿಣಾಮ ಬೀರುತ್ತದೆ? ಎಂಬ ಪ್ರಶ್ನೆಗಳು ಈಗ ಎಲ್ಲೆಡೆ ಚರ್ಚೆಗೆ ಗ್ರಾಸವಾಗಿದೆ.
ವಿಜಯಕುಮಾರ ಸಾರವಾಡ
ಇನ್ ನ್ಯೂಜ್
ವಿಜಯಪುರ.
