ತಂದೆ ತಾಯಿಗೆ ತರಕಾರಿ ವ್ಯಾಪಾರಕ್ಕೆ ಸಹಾಯ ಮಾಡುವುದರ ಮಧ್ಯೆಯೂ ವಿದ್ಯಾರ್ಥಿಗಳಿಬ್ಬರು ಉತ್ತಮ ಅಂಕಗಳನ್ನು ಪಡೆದುಕೊಳ್ಳುವುದರ ಮೂಲಕ ಸಾಧನೆ ಮಾಡಿ ಇತರ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದಾನೆ.


ಹೌದು…ಧಾರವಾಡದ ಕಲ್ಯಾಣ ನಗರದ ಬೀದಿಬದಿ ತರಕಾರಿ ಮಾರುವ ಕುಟುಂಬದ ವಿದ್ಯಾರ್ಥಿಗಳಿಬ್ಬರು ಹತ್ತನೇ ತರಗತಿ ಪರೀಕ್ಷೆಯಲ್ಲಿ ಒಬ್ಬರು ಶೇ 82 ರಷ್ಟು ಹಾಗೂ ಇನ್ನೊಬ್ಬರು ಶೇ 86 ರಷ್ಟು ಫಲಿತಾಂಶ ಪಡೆದು ಸಾಧನೆ ಮಾಡಿದ್ದಾರೆ. ಪ್ರತಿನಿತ್ಯ ಬೆಳಗಿನ ಜಾವದಿಂದ ಹಿಡಿದು ತಡರಾತ್ರಿಯ ವರೆಗೆ ತಂದೆ-ತಾಯಿಗೆ ತರಕಾರಿ ಮಾರಲು ಸಹಾಯ ಮಾಡುತ್ತಲೇ, ಶ್ರದ್ಧೆಯಿಂದ ವಿದ್ಯಾಭ್ಯಾಸ ಮಾಡಿ ಧಾರವಾಡದ ಕೆ.ಇ ಬೋರ್ಡ್ ಇಂಗ್ಲಿಷ್ ಮಾಧ್ಯಮ ಶಾಲೆಯ ವಿದ್ಯಾರ್ಥಿ ನೀಲಕಂಠ ತಿಪ್ಪಣ್ಣ ಪಟ್ಟೇದ ಶೇ 82.56 ರಷ್ಟು ಅಂಕಗಳನ್ನು ಪಡೆದಿದ್ದು, ಅದರಂತೆಯೇ ಅವರ ಸೋದರ ಅಳಿಯ ಧಾರವಾಡ ತಾಲೂಕಿನ ಕರಡಿಗುಡ್ಡ ಗ್ರಾಮದಲ್ಲಿರುವ ಕರ್ನಾಟಕ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿ ಬಸವರಾಜ ಗುರಪ್ಪ ಅಂಗಡಿ ಶೇಕಡಾ 86 ರಷ್ಟು ಫಲಿತಾಂಶ ಪಡೆದು ಉತ್ತಮ ಸಾಧನೆ ಮಾಡಿದ್ದಾನೆ. ಪಾಲಕರು ತಮ್ಮ ಮಗ ಹಾಗೂ ಅಳಿಯನ ಫಲಿತಾಂಶಕ್ಕೆ ಹರ್ಷ ವ್ಯಕ್ತಪಡಿಸಿ ಸಿಹಿ ತಿನ್ನಿಸಿ ಸಂಭ್ರಮಿಸಿದ್ದಾರೆ.
ಬಡತನದ ಮಧ್ಯೆ ಉತ್ತಮ ಅಂಕ ಗಳಿಸಿ ನಮ್ಮ ಗೌರವ ಹೆಚ್ಚಿಸಿದ್ದಾರೆ ಎಂದು ಪೋಷಕರಾದ ಹೇಮಾ ಹಾಗೂ ತಿಪ್ಪಣ್ಣ ಪಟ್ಟೇದ ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ.
