“ಕೇಂದ್ರದಲ್ಲಿ ಪ್ರದಾನಮಂತ್ರಿ ನರೇಂದ್ರ ಮೋದಿ ಅವರು ಜಾರಿಗೆ ತರಲು ಉದ್ದೇಶಿಸಿದ ನಾರಿಶಕ್ತಿ ವಂದನ್ ಮಸೂದೆಗೆ ಮತ ಹಾಕದೇ ಕಾಂಗ್ರೆಸ್ ಹಾಗೂ ಮಿತ್ರಪಕ್ಷಗಳು ಭಾರತ ಮಾತೆಯ ಭ್ರೂಣ ಹತ್ಯೆಯನ್ನು ಮಾಡಿವೆ. ಭಾರತೀಯ ಮಹಿಳೆಯರಿಗೆ ತೀವ್ರ ಅನ್ಯಾಯ ಮಾಡಿವೆ” ಎಂದು ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ, ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಚಿಕ್ಕೋಡಿ ಪಟ್ಟಣದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಗುರುವಾರ ಕರೆದ ಜಂಟಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, “ಕಾಂಗ್ರೆಸ್, ಟಿಎಂಸಿ, ಡಿಎಂಕೆ, ಸಮಾಜವಾದಿ ಪಕ್ಷಗಳು ಕುಟುಂಬ ರಾಜಕಾರಣ ಮಾಡುತ್ತಿದ್ದು, ಹೀಗಾಗಿ ಲೋಕಸಭೆ ಹಾಗೂ ವಿಧಾನಸಭೆಯಲ್ಲಿ ಮಹಿಳೆಯರಿಗೆ ಸಿಗಬೇಕಿದ್ದ ಮೀಸಲಾತಿಗೆ ವಿರೋಧ ಮಾಡಿವೆ. ಸಂಸತ್ತಿನಲ್ಲಿ ನಾರಿಶಕ್ತಿ ವಂದನ್ ಮಸೂದೆ ವಿರೋಧಿಸಿ ಮತ ಹಾಕುವ ಮೂಲಕ ಚರಿತ್ರೆಯಲ್ಲಿ “ಕರಾಳ ಅಕ್ಷರ” ಮೂಡಿಸಿದೆ” ಎಂದು ಕಿಡಿಕಾರಿದರು.
“ನಾರಿಶಕ್ತಿ ವಂದನ್ ಮಸೂದೆ ವಿರೋಧಿಸಿದ ಕಾಂಗ್ರೆಸ್ ನಾಯಕ ರಾಹುಲ ಗಾಂಧಿ ಸೇರಿದಂತೆ ವಿರೋಧ ಪಕ್ಷದ ನಾಯಕರು ರಾವಣ, ಕೌರವ, ಕಂಸರಂತೆ ಮಹಿಳೆಯರಿಗೆ ಕಿರುಕುಳ ನೀಡಿದ್ದಾರೆ. ಮಹಿಳೆಯರಿಗೆ ಕಿರುಕುಳ ನೀಡಿದವರ್ಯಾರೂ ಇತಿಹಾಸದಲ್ಲಿ ಉಳಿದಿಲ್ಲ. ಕಾಂಗ್ರೆಸ್ ಹಾಗೂ ಮಿತ್ರ ಪಕ್ಷಗಳ ಸ್ಥಿತಿಯು ಇದೇ ಆಗುತ್ತದೆ” ಎಂದು ಭವಿಷ್ಯ ನುಡಿದರು.
ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಮಾತನಾಡಿ, “ವಿರೋಧ ಪಕ್ಷಗಳು ವಿರೋಧ ಮಾಡಬೇಕು. ಅದು ಸಹಜ. ಆದರೆ ದೇಶದಲ್ಲಿ ಶೇ.50 ರಷ್ಟು ಇರುವ ಮಹಿಳೆಯರಿಗೆ ರಾಜಕೀಯದಲ್ಲಿ ಮೀಸಲಾತಿ ತರಲು ವಿರೋಧ ಮಾಡಿದ್ದು ಸರಿಯಾದ ಕ್ರಮವಲ್ಲ. 2011ರ ಜನಗಣತಿಯಂತೆ ಕರ್ನಾಟಕ ರಾಜ್ಯದಲ್ಲಿ ಲೋಕಸಭೆಯ ಸದಸ್ಯರ ಸಂಖ್ಯೆ 28 ರಿಂದ 42ಕ್ಕೆ ಏರಿಕೆಯಾಗಲಿದೆ. ಕ್ಷೇತ್ರಗಳ ಪುನರ್ ವಿಂಗಡಣೆಯಿಂದ ಮಿತ್ರ ಪಕ್ಷಗಳು ಆರೋಪಿಸಿದಂತೆ ಯಾವುದೇ ಅನ್ಯಾಯವಾಗುದಿಲ್ಲ” ಎಂದರು.
“ಮಹಿಳಾ ಮೀಸಲಾತಿ ವಿರೋಧಿಸಿದ ಕಾಂಗ್ರೆಸ್ ಹಾಗೂ ಮಿತ್ರಪಕ್ಷಗಳ ವಿರುದ್ಧ ಬಿಜೆಪಿ ಏ.25ರಂದು ಜಿಲ್ಲಾ ಮಟ್ಟದಲ್ಲಿಯೂ ಹಾಗೂ ಏ.27ರಂದು ಪ್ರತಿ ಮಂಡಲದಲ್ಲಿ ಬಿಜೆಪಿ ಪಕ್ಷದಿಂದ ಪ್ರತಿಭಟನೆ ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ” ಎಂದು ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ರಾಜ್ಯ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಶಾಂಭವಿ ಅಶ್ವತ್ಥಪೂರ, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಶಕುಂತಲಾ ಡೋಣವಾಡೆ, ಚಿಕ್ಕೋಡಿ ಜಿಲ್ಲಾ ಪ್ರದಾನ ಕಾರ್ಯದರ್ಶಿ ಸದಾಶಿವ ಹಳಿಂಗಳೆ, ಅಪ್ಪಾಸಾಹೇಬ ಚೌಗಲಾ, ಪವನ ಮಹಾಜನ, ಸಂಜಯ ಪಾಟೀಲ ಇತರರು ಇದ್ದರು.
