ಬಾಗಲಕೋಟೆ ಜಿಲ್ಲೆಯ ಕೆರೂರು ಪೊಲೀಸ್ ಠಾಣೆಯ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು, ಲಂಚ ಸ್ವೀಕರಿಸುವಾಗ ಪಿಎಸ್ಐ ಮತ್ತು ಪಿಸಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಈ ಸುದ್ದಿ ತಿಳಿಯುತ್ತಿದ್ದಂತೆಯೇ ಇಡೀ ಪಟ್ಟಣದ ಜನತೆ ಠಾಣೆಯ ಮುಂದೆ ಜಮಾಯಿಸಿ ಸಂಭ್ರಮಾಚರಣೆ ನಡೆಸಿದ ಅಪರೂಪದ ಘಟನೆ ನಡೆದಿದೆ.

ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಕೆರೂರು ಪಟ್ಟಣದಲ್ಲಿ ಭ್ರಷ್ಟಾಚಾರದ ವಿರುದ್ಧದ ಆಕ್ರೋಶ ಸ್ಫೋಟಗೊಂಡಿದೆ. ಲೋಕಾಯುಕ್ತ ಬಲೆಗೆ ಬಿದ್ದ ಪಿಎಸ್ಐ ಭೀಮಪ್ಪ ರಬಕವಿ ಮತ್ತು ಓರ್ವ ಪಿಸಿ ವಿರುದ್ಧ ಸಾರ್ವಜನಿಕರು ತೀವ್ರ ಆಕ್ರೋಶ ಹೊರಹಾಕಿದ್ದಾರೆ. ನಿನ್ನೆ ಸಂಜೆಯವರೆಗೂ ಲೋಕಾಯುಕ್ತ ಅಧಿಕಾರಿಗಳ ವಿಚಾರಣೆ ಮುಂದುವರಿದಿದ್ದು, ಈ ವೇಳೆ ಠಾಣೆಯ ಮುಂದೆ ನೂರಾರು ಜನರು ಜಮಾಯಿಸಿದ್ದರು. ಈ ಪಿಎಸ್ಐ ಹಿರಿಯರನ್ನು ಏಕವಚನದಲ್ಲಿ ನಿಂದಿಸುತ್ತಿದ್ದರು ಮತ್ತು ಹಣಕ್ಕಾಗಿ ಜನರಿಗೆ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಿರುವ ಸಾರ್ವಜನಿಕರು, ಭ್ರಷ್ಟ ಅಧಿಕಾರಿಯನ್ನು ಬಹಿರಂಗವಾಗಿ ಮೆರವಣಿಗೆ ಮಾಡಬೇಕು ಎಂದು ಆಗ್ರಹಿಸಿದರು.
ಲೋಕಾಯುಕ್ತ ವಿಚಾರಣೆ ಮುಗಿಸಿ ಪಿಎಸ್ಐ ಹೊರಬರುತ್ತಿದ್ದಂತೆಯೇ ಕೆರೂರು ಪಟ್ಟಣದ ಯುವಕರು ಮತ್ತು ಸಾರ್ವಜನಿಕರು ಪೊಲೀಸ್ ಠಾಣೆಯ ಮುಂದೆಯೇ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು. ಪಿಎಸ್ಐ ಭೀಮಪ್ಪ ಅವರ ಲಂಚಾವತಾರಕ್ಕೆ ಬೇಸತ್ತಿದ್ದ ಜನರು, ಈ ದಾಳಿಯಿಂದ ಪಟ್ಟಣಕ್ಕೆ ಮುಕ್ತಿ ಸಿಕ್ಕಂತಾಗಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ಧಾರ್ಥ್ ಗೋಯಲ್ ಅವರು ಬರಬೇಕೆಂದು ಪಟ್ಟು ಹಿಡಿದಿದ್ದ ಜನರು, ಭ್ರಷ್ಟಾಚಾರ ಮುಕ್ತ ಆಡಳಿತಕ್ಕೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು.
