raybag

ಪತಿ ಮನೆಗೆ ಹೋದ ಮೂರೇ ದಿನಕ್ಕೆ ಯುವತಿ ಸಾವು: ಕೊಲೆ ಆರೋಪ ಹೊರಿಸಿದ ತಾಯಿ!

Share

• ಮೇಕಳಿ ಗ್ರಾಮದಲ್ಲಿ ನವವಧು ಸಂಶಯಾಸ್ಪದ ಸಾವು
• ಗಂಡನ ಮನೆಗೆ ಹೋದ ಮೂರನೇ ದಿನಕ್ಕೆ ಸಾವು
• ಮಗಳನ್ನು ಹೊಡೆದು ಕೊಂದಿದ್ದಾರೆಂದು ಯುವತಿ ಮನೆಯವರ ಆರೋಪ
• ರಾಯಬಾಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಪತಿ ಮನೆಗೆ ಬಂದ ಮೂರನೇ ದಿನಕ್ಕೆ ವಿವಾಹಿತೆಯೋರ್ವಳು ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಘಟನೆ ರಾಯಬಾಗ ತಾಲೂಕಿನ ಮೇಖಳಿ ಗ್ರಾಮದಲ್ಲಿ ನಡೆದಿದೆ.

ಜ್ಯೋತಿ ಕಾಂಬಳೆ (23) ಆತ್ಮಹತ್ಯೆಗೆ ಶರಣಾದ ಮಹಿಳೆ ಎಂದು ಗುರುತಿಸಲಾಗಿದೆ. ಮೂರು ವರ್ಷಗಳ ಹಿಂದೆ ಹಣಮಂತ ಕಾಂಬಳೆ ಅವರೊಂದಿಗೆ ಜ್ಯೋತಿ ವಿವಾಹವಾಗಿದ್ದು, ಮದುವೆಯ ನಂತರ ಕೇವಲ ಮೂರು ದಿನಗಳಷ್ಟೇ ಗಂಡನ ಮನೆಯಲ್ಲಿ ವಾಸವಿದ್ದಳು.
ಗಂಡನ ಮನೆಯವರ ಕಾಟದ ಹಿನ್ನೆಲೆಯಲ್ಲಿ ಜ್ಯೋತಿಯನ್ನು ತವರು ಮನೆಗೆ ಕರೆದುಕೊಂಡು ಹೋಗಲಾಗಿತ್ತು. ಬಳಿಕ ಸುಮಾರು ಎರಡು ವರ್ಷಗಳ ನಂತರ ಗಂಡನ ಮನೆಯವರು ಮತ್ತೆ ಆಕೆಯನ್ನು ಕರೆದುಕೊಂಡು ಹೋಗಿದ್ದಾರೆ. ಆದರೆ, ಗಂಡನ ಮನೆಗೆ ಹೋದ ಮೂರೇ ದಿನಗಳಲ್ಲಿ ಜ್ಯೋತಿ ಮೃತಪಟ್ಟಿರುವುದು ಕುಟುಂಬಸ್ಥರ ನಾನಾ ಅನುಮಾನಕ್ಕೆ ಕಾರಣವಾಗಿದೆ.

ಕಿರುಕುಳ ನೀಡಿದ ಹಿನ್ನೆಲೆ ಆಕೆಯನ್ನು ತವರೂ ಮನೆಗೆ ಕರೆದುಕೊಂಡು ಬಂದಾಗ ಪ್ರತಿ ಬಾರಿಯೂ ಜನರನ್ನು ಕರೆದುಕೊಂಡು ಬಂದು ಜಗಳವಾಡುತ್ತಿದ್ದರು. 18 ವರ್ಷ ತುಂಬಿದ ಬಳಿಕ ಕರೆದುಕೊಂಡು ಹೋಗಿ ಎಂದು ಹೇಳಿದರೂ ಕೂಡ ಗುರುವಾರ ಕರೆದುಕೊಂಡು ಹೋಗಿದ್ದಾರೆ. ಇಂದು ಬೆಳಗಿನ ಜಾವ ತೀರಿಕೊಂಡಿರುವುದಾಗಿ ವಿಷಯ ತಿಳಿಸಿದ್ದಾರೆ. ಆಕೆಯನ್ನು ಹೊಡೆದು ಕೊಲೆ ಮಾಡಿ ನೇಣು ಹಾಕಿದ್ದಾರೆಂದು ಯುವತಿಯ ಮನೆಯವರು ಅನುಮಾನ ವ್ಯಕ್ತಪಡಿಸಿದ್ದಾರೆ.

ಮದುವೆಯಾಗಿ 3 ವರ್ಷವಾಗಿದೆ. ಮದುವೆಯಾಗಿ ಒಂದು ತಿಂಗಳಲ್ಲೇ ಕಿರುಕುಳ ನೀಡುತ್ತಿದ್ದರು. ಈ ಹಿನ್ನೆಲೆ ತವರೂ ಮನೆಗೆ ಕರೆದುಕೊಂಡು ಬರಲಾಗಿತ್ತು. ಆದರೇ, 3 ವರ್ಷದ ಬಳಿಕ ಮತ್ತೇ ಆಕೆಯನ್ನು ಕರೆದುಕೊಂಡು ಹೋಗಿ 3 ದಿನದಲ್ಲೇ ಆಕೆ ಮೃತಪಟ್ಟಿದ್ದಾಳೆ. ನೇಣು ಹಾಕಿಕೊಂಡರೇ, ಕಾಲುಗಳು ನೆಲಕ್ಕೆ ತಾಗಿವೆ. ಕುತ್ತಿಗೆಗೆ ಯಾವುದೇ ಕಲೆಗಳಿಲ್ಲ. ನನ್ನ ಮಗಳನ್ನು ಕೊಲೆ ಮಾಡಿದ್ದಾರೆಂದು ಮೃತಳ ತಾಯಿ ಸುಜಾತಾ ಆರೋಪಿಸಿದರು.

ಈ ಕುರಿತು ರಾಯಬಾಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:

error: Content is protected !!