ಬೆಳಗಾವಿ ನಗರದ ವಾಹನ ಸವಾರರಿಗೆ ಇಲ್ಲಿದೆ ಒಂದು ಪ್ರಮುಖ ಮತ್ತು ನಿರಾಳತೆ ತರುವ ಸುದ್ದಿ. ನಿಮ್ಮ ವಾಹನದ ಮೇಲೆ ಸಂಚಾರ ನಿಯಮ ಉಲ್ಲಂಘನೆಯ ಬಾಕಿ ದಂಡವಿದೆಯೇ? ಹಾಗಿದ್ದರೆ ತಡ ಮಾಡಬೇಡಿ, ಸರ್ಕಾರ ನಿಮಗಾಗಿ ಭರ್ಜರಿ 50% ರಿಯಾಯಿತಿ ಪ್ರಕಟಿಸಿ ಸುವರ್ಣಾವಕಾಶ ನೀಡಿದ್ದು, ಅದರ ಸದುಪಯೋಗ ಪಡಿಸಿಕೊಳ್ಳಲು ಪೊಲೀಸ್ ಕಮಿಷ್ನರ್ ಅವರು ಕರೆ ನೀಡಿದ್ದಾರೆ.
ಕರ್ನಾಟಕ ರಾಜ್ಯ ಸರ್ಕಾರವು ಮೇ-2026 ರ ಮೊದಲು ಪೊಲೀಸ್ ಇಲಾಖೆಯ ಸಂಚಾರ ಇ-ಚಲನ್ಗಳಲ್ಲಿ ದಾಖಲಾಗಿ ಬಾಕಿ ಇರುವ ಪ್ರಕರಣಗಳ ದಂಡದ ಮೊತ್ತದಲ್ಲಿ ಶೇಕಡಾ 50 ರಷ್ಟು ಭರ್ಜರಿ ರಿಯಾಯಿತಿ ಘೋಷಿಸಿದೆ. ಈ ವಿಶೇಷ ರಿಯಾಯಿತಿ ಯೋಜನೆಯು ದಿನಾಂಕ 21.06.2026 ರಿಂದ ಆರಂಭಗೊಂಡು 10.07.2026 ರವರೆಗೆ ದಿನಗಳು ಜಾರಿಯಲ್ಲಿರಲಿದೆ. ಬೆಳಗಾವಿ ನಗರದ ಸಾರ್ವಜನಿಕರು ಹಾಗೂ ವಾಹನ ಸವಾರರು ತಮ್ಮ ವಾಹನಗಳ ಮೇಲಿರುವ ಹಳೆಯ ಬಾಕಿ ದಂಡದ ಅರ್ಧದಷ್ಟು ಮೊತ್ತವನ್ನು ಪಾವತಿಸಿ, ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳುವಂತೆ ಬೆಳಗಾವಿ ನಗರ ಪೊಲೀಸ್ ಆಯುಕ್ತರು ಪ್ರಕಟಣೆಯಲ್ಲಿ ಕರೆ ನೀಡಿದ್ದಾರೆ.

ಸಾರ್ವಜನಿಕರು ತಮ್ಮ ಬಾಕಿ ದಂಡವನ್ನು ಪಾವತಿಸಲು ಹಲವು ಸುಲಭ ಆಯ್ಕೆಗಳನ್ನು ಒದಗಿಸಲಾಗಿದೆ. ನಿರತ ವಾಹನ ಸವಾರರು ತಮ್ಮ ಹತ್ತಿರದ ಸಂಚಾರ ಪೊಲೀಸ್ ಠಾಣೆ ಅಥವಾ ಪೊಲೀಸ್ ಆಯುಕ್ತರ ಕಚೇರಿಯ ರಿಸೆಪ್ಷನ್ ಡೆಸ್ಕ್’ನಲ್ಲಿರುವ ಪೊಲೀಸ್ ಅಧಿಕಾರಿಗಳ ಬಳಿ ದಂಡ ಪಾವತಿಸಬಹುದು. ಇದಲ್ಲದೆ, ನಗರದ ಕರ್ನಾಟಕ ಒನ್ ಅಥವಾ ಬೆಳಗಾವಿ ಒನ್ ಕೇಂದ್ರಗಳಾದ ಅಶೋಕ ನಗರ, ದೂರದರ್ಶನ ನಗರ (ಟಿ.ವಿ. ಸೆಂಟರ್), ರಿಸಲ್ದಾರ್ ಗಲ್ಲಿ (ಹಳೇ ಕಾರ್ಪೊರೇಷನ್ ಬಿಲ್ಡಿಂಗ್), ಮತ್ತು ಗೋವಾವೇಸ್ ಕೇಂದ್ರಗಳಲ್ಲೂ ಹಣ ಪಾವತಿಗೆ ಅವಕಾಶವಿದೆ. ಜೊತೆಗೆ ರಸ್ತೆಯಲ್ಲಿ ಇ-ಚಲನ್ ಮಷೀನ್ ಹೊಂದಿರುವ ಎಎಸ್ಐ ಹಾಗೂ ಮೇಲ್ಪಟ್ಟ ಅಧಿಕಾರಿಗಳ ಬಳಿಯೂ ದಂಡ ಪಾವತಿಸಿ ರಶೀದಿ ಪಡೆದುಕೊಳ್ಳಬಹುದಾಗಿದ್ದು, ಸಾರ್ವಜನಿಕರು ಈ 20 ದಿನಗಳ ಸುವರ್ಣಾವಕಾಶವನ್ನು ತಪ್ಪದೇ ಸದುಪಯೋಗಪಡಿಸಿಕೊಳ್ಳಬೇಕಾಗಿ ವಿನಂತಿಸಲಾಗಿದೆ.
