ರಾಯಬಾಗ ತಾಲೂಕಿನ ಪರಮಾನಂದವಾಡಿ ಹಾಗೂ ಶಿರಗುರ ಗ್ರಾಮದ ಸಮೀಪ ಕೃಷ್ಣಾ ನದಿಯ ತೀರದಲ್ಲಿ ಏಕಾಏಕಿ ಭೂಕುಸಿತ ಸಂಭವಿಸಿದ್ದು ಶನಿವಾರ ರೈತರಲ್ಲಿ ಆತಂಕ ಮೂಡಿಸಿದೆ.

ಬೆಳಗಾವಿ ಜಿಲ್ಲೆಯ ಕುಡಚಿ ಕ್ಷೇತ್ರ ವ್ಯಾಪ್ತಿಯಲ್ಲಿ ನಡೆದ ಈ ಘಟನೆ ಕೃಷ್ಣಾ ನದಿಯ ಒಡಲು ಕುಸಿತಕ್ಕೆ ಕಾರಣವಾಗಿದೆ. ಭೂಕುಸಿತದ ಪರಿಣಾಮ ನದಿತೀರದ ಕೃಷಿ ಜಮೀನುಗಳಿಗೆ ಅಳವಡಿಸಿದ್ದ ಪಂಪ್‌ಸೆಟ್, ವಿದ್ಯುತ್ ಕೇಬಲ್ ಹಾಗೂ ನೀರಿನ ಪೈಪ್‌ಗಳಿಗೆ ಹಾನಿಯಾಗಿದೆ. ಕೆಲ ರೈತರು ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆಯೇ ಕುಡಚಿ ಶಾಸಕ ಮಹೇಂದ್ರ ತಮ್ಮಣ್ಣನವರ್ ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದರು. ರೈತರೊಂದಿಗೆ ಮಾತುಕತೆ ನಡೆಸಿದ ಅವರು, ಸಂಬಂಧಿಸಿದ ಅಧಿಕಾರಿಗಳಿಗೆ ತಕ್ಷಣ ವರದಿ ಸಲ್ಲಿಸುವಂತೆ ಸೂಚಿಸಿದರು.
ಭೂಕುಸಿತದಿಂದ ಉಂಟಾದ ನಷ್ಟದ ಕುರಿತು ಸರ್ಕಾರದ ಗಮನಕ್ಕೆ ತರಲಾಗುವುದು ಹಾಗೂ ರೈತರಿಗೆ ಸೂಕ್ತ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಮಹೇಂದ್ರ ತಮ್ಮಣ್ಣನವರ್ ಭರವಸೆ ನೀಡಿದರು.

