bellari

ಬಳ್ಳಾರಿಯಲ್ಲಿ ಪ್ಯಾರಾಚ್ಯೂಟ್ ತರಬೇತಿ ವೇಳೆ ಘೋರ ಅವಘಡ: 50 ಅಡಿ ಎತ್ತರದಿಂದ ಬಿದ್ದು ಇಬ್ಬರು ಯೋಧರಿಗೆ ಗಂಭೀರ ಗಾಯ – ಬೆಂಗಳೂರಿಗೆ ಏರ್‌ಲಿಫ್ಟ್

Share

* ಸೈನಿಕರ ತರಬೇತಿ ವೇಳೆ ತಾಂತ್ರಿಕ ದೋಷ.
* 50 ಅಡಿ ಎತ್ತರದಿಂದ ಕೆಳಗೆ ಬಿದ್ದ ಯೋಧರು.
* ಇಬ್ಬರು ಯೋಧರ ಕಾಲಿನ ಮೂಳೆ ಮುರಿತ.
* ಹೆಲಿಕಾಪ್ಟರ್ ಮೂಲಕ ಬೆಂಗಳೂರಿಗೆ ರವಾನೆ.

ಬಳ್ಳಾರಿ ಹೊರವಲಯದಲ್ಲಿ ಪ್ಯಾರಾಚ್ಯೂಟ್ ತರಬೇತಿ ವೇಳೆ ಭೀಕರ ಅವಘಡವೊಂದು ಸಂಭವಿಸಿದೆ. 800 ಅಡಿ ಎತ್ತರದಿಂದ ಜಿಗಿದಿದ್ದ ಯೋಧರಲ್ಲಿ ಇಬ್ಬರು ತಾಂತ್ರಿಕ ಸಮಸ್ಯೆಯಿಂದಾಗಿ ಸುಮಾರು 50 ಅಡಿ ಎತ್ತರದಿಂದ ಭೂಮಿಗೆ ಅಪ್ಪಳಿಸಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಯೋಧರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಏರ್‌ಲಿಫ್ಟ್ ಮಾಡಲಾಗಿದೆ.

ಬಳ್ಳಾರಿ ಹೊರವಲಯದ ಪಿ.ಡಿ. ಹಳ್ಳಿ ಭಾಗದಲ್ಲಿ 417 ಸೈನಿಕರಿಗಾಗಿ ಪ್ಯಾರಾಚ್ಯೂಟ್ ತರಬೇತಿ ಶಿಬಿರ ಆಯೋಜಿಸಲಾಗಿತ್ತು. ಇಂದು ಮುಂಜಾನೆ 800 ಅಡಿ ಎತ್ತರದಿಂದ ಸೈನಿಕರು ಜಿಗಿಯುವ ಸಾಹಸ ಪ್ರದರ್ಶಿಸುತ್ತಿದ್ದರು. ಇನ್ನೇನು ಭೂಸ್ಪರ್ಶ ಮಾಡಲು 50 ಅಡಿ ಬಾಕಿ ಇದೆ ಎನ್ನುವಾಗ 25 ವರ್ಷದ ಚಿನ್ನರಾಜ್ ಹಾಗೂ ಇನ್ನೊಬ್ಬ ಯೋಧನ ಪ್ಯಾರಾಚ್ಯೂಟ್ ಕೈಕೊಟ್ಟಿದೆ. ಸಮತೋಲನ ಕಳೆದುಕೊಂಡ ಇಬ್ಬರೂ ಸೈನಿಕರು ನೇರವಾಗಿ ಭೂಮಿಗೆ ಅಪ್ಪಳಿಸಿದ್ದು, ಇಬ್ಬರ ಕಾಲಿನ ಮೂಳೆಗಳು ಮುರಿದು ಗಂಭೀರ ಗಾಯಗಳಾಗಿವೆ.

ಘಟನೆ ಸಂಭವಿಸುತ್ತಿದ್ದಂತೆಯೇ ಗಾಯಾಳುಗಳನ್ನು ಬಳ್ಳಾರಿಯ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು. ಆದರೆ ಪರಿಸ್ಥಿತಿ ಗಂಭೀರವಾಗಿದ್ದ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ರವಾನಿಸಲು ಸೇನಾ ಅಧಿಕಾರಿಗಳು ನಿರ್ಧರಿಸಿದರು. ಐಟಿಐ ಕಾಲೇಜು ಮೈದಾನಕ್ಕೆ ಆಗಮಿಸಿದ ಸೇನಾ ಹೆಲಿಕಾಪ್ಟರ್ ಮೂಲಕ ಇಬ್ಬರು ಯೋಧರನ್ನು ಬೆಂಗಳೂರಿನ ಕಮಾಂಡ್ ಆಸ್ಪತ್ರೆಗೆ ಏರ್‌ಲಿಫ್ಟ್ ಮಾಡಲಾಗಿದೆ. ಘಟನೆಯ ಕುರಿತು ಸ್ಥಳೀಯ ಪೊಲೀಸ್ ಮೂಲಗಳು ಮಾಹಿತಿಯನ್ನು ಖಚಿತಪಡಿಸಿದ್ದು, ತರಬೇತಿ ವೇಳೆ ಉಂಟಾದ ತಾಂತ್ರಿಕ ದೋಷವೇ ಅವಘಡಕ್ಕೆ ಕಾರಣ ಎನ್ನಲಾಗುತ್ತಿದೆ.

Tags:

error: Content is protected !!