Bellari

140 ಸ್ಥಾನಗಳನ್ನು ಗೆಲ್ಲುವ ಮೂಲಕ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲಿದೆ : ಸಾರಿಗೆ ಸಚಿವ ಶ್ರೀರಾಮುಲು ವಿಶ್ವಾಸ

Share

‘ರಾಜ್ಯದಲ್ಲಿ ಕಾಂಗ್ರೆಸ್ ದಿವಾಳಿ ಆಗಿದೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಹರಾಜಿಗೆ ಬರಲಿದೆ. ನಾವು ಬೊಮ್ಮಾಯಿ ನೇತೃತ್ವದಲ್ಲಿ ವಿಧಾನಸಭಾ ಚುನಾವಣೆಯನ್ನು ಎದುರಿಸಿ, 140 ಸ್ಥಾನಗಳನ್ನು ಗೆಲ್ಲುವ ಮೂಲಕ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲಿದೆ’ ಎಂದು ಸಾರಿಗೆ ಸಚಿವ ಶ್ರೀರಾಮುಲು ವಿಶ್ವಾಸ ವ್ಯಕ್ತಪಡಿಸಿದರು.

ಮಾಧ್ಯಮದವರೊಂದಿಗೆ ಮಾತನಾಡಿ, ‘ಕಾಂಗ್ರೆಸ್ ಜನರಿಗೆ ಟೋಪಿ ಹಾಕೋದು, ಕಿವಿಯಲ್ಲಿ ಹೂ ಇಡೋದು, ಡೋಂಗಿ ಮಾತನಾಡೋದು ಮಾಡುತ್ತಾ ಇದೆ. ಮೀಸಲಾತಿ ಘೋಷಣೆ ಬಳಿಕ ಕಾಂಗ್ರೆಸ್ ನಿದ್ದೆಗೆಟ್ಟಿದೆ. ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಏನೇ ಸರ್ಕಸ್ ಮಾಡಿದರೂ ಬಿಜೆಪಿ ಗೆಲುವು ಸಾಧಿಸಲಿದೆ ಎಂದರು.

ಬಿಜೆಪಿ ಶಾಸಕರಿಗೆ ಡಿಕೆಶಿ ಗಾಳ ಹಾಕಿದ ವಿಚಾರಕ್ಕೆ ಪ್ರತಿಕ್ರಿಯಿಸಿ, ಕೆಪಿಸಿಸಿ ಅಧ್ಯಕ್ಷರಾಗಿ ನಮ್ಮ ಪಕ್ಷದ ಶಾಸಕರನ್ನು ಸೆಳೆಯುತ್ತಾರೆ ಅಂದರೆ, ಕಾಂಗ್ರೆಸ್‌ನವರಿಗೆ ಸೋಲಿನ ಭಯ ಕಾಡುತ್ತಿದೆ ಎಂದರ್ಥ. ಡಿಕೆಶಿ ಮಾತಿಗೆ ನಮ್ಮ ಪಕ್ಷದ ಶಾಸಕರು ಮರುಳಾಗಿ ಕಾಂಗ್ರೆಸ್ಸಿಗೆ ಹೋದರೆ ಮುಂದೆ ಪಶ್ಚಾತ್ತಾಪ ಪಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

‘ಕೂಡ್ಲಿಗಿ ಶಾಸಕ ಎನ್.ವೈ. ಗೋಪಾಲಕೃಷ್ಣ ರಾಜೀನಾಮೆ ನೀಡಿರುವುದು ನನಗೆ ಮತ್ತು ಕಾರ್ಯಕರ್ತರಿಗೆ ನೋವು ತಂದಿದೆ. ಅವರ ರಾಜೀನಾಮೆಯನ್ನು ನಿರೀಕ್ಷೆ ಮಾಡಿರಲಿಲ್ಲ. ಅವರ ಆತುರದ ನಿರ್ಧಾರ ಕಾರ್ಯಕರ್ತರ ಮೇಲೆ ಪರಿಣಾಮ ಬೀರುತ್ತದೆ’ ಎಂದು ಸಾರಿಗೆ ಸಚಿವ ಶ್ರೀರಾಮುಲು ಹೇಳಿದರು.

ಗೋಪಾಲಕೃಷ್ಣ ಅವರು ಬಿಜೆಪಿಯಲ್ಲಿ ಇದ್ದಿದ್ರೆ ಮತ್ತೆ ಗೆಲುವು ಸಾಧಿಸುತ್ತಿದ್ದರು. ರಾಜೀನಾಮೆ ಕೊಡುವ ಮೊದಲು ನನ್ನ ಜೊತೆ ಮಾತನಾಡಿಲ್ಲ. ನಮ್ಮ ಪಕ್ಷ ಕೂಡ್ಲಗಿ ಕ್ಷೇತ್ರದಲ್ಲಿ ಬಲಿಷ್ಟವಾಗಿದೆ. ಮತ್ತೆ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುತ್ತೇವೆಎಂದರು.

ಆರು ಶಾಸಕರು ಗೋಪಾಲಕೃಷ್ಣ ಜೊತೆ ಕಾಂಗ್ರೆಸ್ ಸೇರ್ಪಡೆಯಾಗುತ್ತಾರಂತೆ ಎಂಬ ಪ್ರಶ್ನೆಗೆ, ಗಾಳಿಯಲ್ಲಿ ಗುಂಡು ಹಾರಿಸುವುದು ಸರಿಯಲ್ಲ. ಯಾರೂ ಕೂಡ ಬಿಜೆಪಿ ಬಿಟ್ಟು ಕಾಂಗ್ರೆಸಿಗೆ ಹೋಗುವುದಿಲ್ಲ ಎಂದು ಪ್ರತಿಕ್ರಿಯಿಸಿದರು.

Tags:

error: Content is protected !!