ರಾಯಬಾಗ ತಾಲೂಕಿನ ಕುಡಚಿ ಪೊಲೀಸ್ ಠಾಣಾ ವ್ಯಾಪ್ತಿಯ ಚಿಂಚಲಿ ಪಟ್ಟಣದಲ್ಲಿ ಅಕ್ರಮವಾಗಿ ಸಂಗ್ರಹಣೆ ಮಾಡಲಾಗಿದ್ದ ಖಾಲಿ ಎಲ್‌ಪಿಜಿ ಸಿಲಿಂಡರ್‌ಗಳನ್ನು ಕುಡಚಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಚಿಂಚಲಿ ಪಟ್ಟಣದ ನಾಮದೇವ ಪೋಳ ಎಂಬವರು ಗಣಿಕೋಡಿ ತೋಟದಲ್ಲಿನ ತಮ್ಮ ಶೆಡ್‌ನಲ್ಲಿ ಅನುಮತಿಯಿಲ್ಲದೆ ಸಿಲಿಂಡರ್‌ಗಳನ್ನು ಸಂಗ್ರಹಣೆ ಮಾಡಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು, ತಕ್ಷಣ ದಾಳಿ ನಡೆಸಿದರು. ಈ ವೇಳೆ 26 ಗೃಹೋಪಯೋಗಿ ಹಾಗೂ 3 ವಾಣಿಜ್ಯ ಬಳಕೆಯ ಖಾಲಿ ಸಿಲಿಂಡರ್‌ಗಳನ್ನು ಸೇರಿಸಿ ಒಟ್ಟು 29 ಸಿಲಿಂಡರ್‌ಗಳನ್ನು ಪತ್ತೆಹಚ್ಚಿ ಜಪ್ತಿ ಮಾಡಿದರು.
ಜಪ್ತಿ ಮಾಡಿದ ಸಿಲಿಂಡರ್‌ಗಳನ್ನು ಆಹಾರ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ಸುರಕ್ಷಿತ ಸ್ಥಳಕ್ಕೆ ಸಾಗಿಸಲಾಗಿದೆ. ಪ್ರಕರಣ ಸಂಬಂಧ ಆರೋಪಿ ನಾಮದೇವ ಪೋಳ ಪರಾರಿಯಾಗಿದ್ದು, ಕುಡಚಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ.
ಈ ಸಂದರ್ಭದಲ್ಲಿ ಕುಡಚಿ ಪಿ.ಎಸ್.ಐ. ಪ್ರೀತಮ್ ನಾಯಿಕ, ಆಹಾರ ಇಲಾಖೆ ಶಿರಸ್ತೇದಾರ್ ಶರಣಪ್ಪ ಬಾಗೇವಾಡಿ, ಆಹಾರ ನಿರೀಕ್ಷಕ ವಿನಾಯಕ ಬಾಟೆ ಸೇರಿದಂತೆ ಪೊಲೀಸ್ ಸಿಬ್ಬಂದಿ ಶೇಖರ್ ಸಾಸನೂರ, ಎಸ.ಡಿ. ಬನಾಜ ಉಪಸ್ಥಿತರಿದ್ದರು.
