bagalkot

ಪಂಚಮಸಾಲಿ ಮೀಸಲಾತಿ ಹೋರಾಟಕ್ಕೆ ಮತ್ತೆ ಕಿಚ್ಚು: ಡಿ. 10ರಂದು ಉಪವಾಸ ಸತ್ಯಾಗ್ರಹಕ್ಕೆ ಬಸವಜಯ ಮೃತ್ಯುಂಜಯ ಶ್ರೀಗಳ ಕರೆ

Share

ಪಂಚಮಸಾಲಿ ಮೀಸಲಾತಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲು ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಕರೆ ನೀಡಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಬುದ್ನಿ ಪಿಎಂ ಗ್ರಾಮದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಶ್ರೀಗಳು, ಡಿಸೆಂಬರ್ 10ರಂದು ಉಪವಾಸ ಸತ್ಯಾಗ್ರಹ ಹಾಗೂ ಬೆಳಗಾವಿ ಅಧಿವೇಶನಕ್ಕೆ ಲಕ್ಷಾಂತರ ಸಂಖ್ಯೆಯಲ್ಲಿ ಜನ ಸೇರುವಂತೆ ಕರೆ ಕೊಟ್ಟಿದ್ದಾರೆ.

ಮೀಸಲಾತಿ ಹೋರಾಟದ ವೇಳೆ ಈ ಹಿಂದೆ ನಡೆದ ಲಾಠಿಚಾರ್ಜ್ ಹಾಗೂ ದೌರ್ಜನ್ಯವನ್ನು ಖಂಡಿಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಬಸವಜಯ ಮೃತ್ಯುಂಜಯ ಸ್ವಾಮೀಜಿ, ಡಿಸೆಂಬರ್ 10ರಂದು ಮೀಸಲಾತಿಗಾಗಿ ಉಪವಾಸ ಸಭೆ ನಡೆಸುವುದಾಗಿ ಘೋಷಿಸಿದ್ದಾರೆ. ಅಂದು ರಾಜ್ಯಾದ್ಯಂತ ‘ಲಿಂಗಾಯತ ದೌರ್ಜನ್ಯ ದಿನ’ವನ್ನಾಗಿ ಆಚರಿಸುವ ಮೂಲಕ ಸರ್ಕಾರದ ಗಮನ ಸೆಳೆಯಬೇಕು ಮತ್ತು ನಮ್ಮ ನ್ಯಾಯಯುತ ಕೂಗನ್ನು ತಲುಪಿಸಬೇಕು ಎಂದು ಕರೆ ನೀಡಿದ್ದಾರೆ. ಬೆಳಗಾವಿ ಅಧಿವೇಶನದ ವೇಳೆ ನಡೆಯುವ ಹೋರಾಟಕ್ಕೆ ಪ್ರತಿ ಹಳ್ಳಿಯಿಂದ ಕನಿಷ್ಠ ಒಂದೊಂದು ವಾಹನದಂತೆ, ತಾಲೂಕುವಾರು ಕನಿಷ್ಠ 10 ವಾಹನಗಳನ್ನು ಸಿದ್ಧಪಡಿಸಿಕೊಂಡು ಲಕ್ಷಾಂತರ ಜನರು ಬೆಳಗಾವಿಗೆ ಆಗಮಿಸಬೇಕು ಎಂದು ಸೂಚಿಸಿದ್ದಾರೆ.

ಚಳಿಗಾಲ ಇರುವುದರಿಂದ ಯಾರಿಗೂ ಅನಗತ್ಯ ಒತ್ತಡ ಹೇರದೆ, ಸ್ವಯಂಪ್ರೇರಿತವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಹೋರಾಟದಲ್ಲಿ ಪಾಲ್ಗೊಳ್ಳುವಂತೆ ಶ್ರೀಗಳು ಮನವಿ ಮಾಡಿದ್ದಾರೆ. 2027 ಚುನಾವಣಾ ವರ್ಷವಾಗಿರುವುದರಿಂದ ಈಗಲೇ ಸರ್ಕಾರದ ಮೇಲೆ ಒತ್ತಡ ಹೇರಿದರೆ ಖಂಡಿತವಾಗಿಯೂ ಮೀಸಲಾತಿ ಸಿಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ ಅವರು, ಈ ಹೋರಾಟ ಕೇವಲ ಪಂಚಮಸಾಲಿ ಸಮಾಜಕ್ಕೆ ಸೀಮಿತವಾಗದೆ ಎಲ್ಲಾ ಲಿಂಗಾಯತ ಒಳಪಂಗಡಗಳೂ ಕೈಜೋಡಿಸಬೇಕು ಎಂದು ಬುದ್ನಿ ಪಿಎಂ ಗ್ರಾಮದ ಸಭೆಯಲ್ಲಿ ಕರೆ ನೀಡಿದ್ದಾರೆ.

Tags:

error: Content is protected !!