Vijaypura

ಕೆರೆ ನಿರ್ಮಾಣಕ್ಕೆ ಆಗ್ರಹಿಸಿ ಕಾನ್ಯಾಳ ಗ್ರಾಮಸ್ಥರ ಪ್ರತಿಭಟನೆ

Share

ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಕಾನ್ಯಾಳ ಗ್ರಾಮದಲ್ಲಿ ಸಾರ್ವಜನಿ ಕರು, ರೈತರು ಹಾಗೂ ಜಾನುವಾರು ಗಳ ಅನುಕೂಲಕ್ಕಾಗಿ ಸರ್ಕಾರಿ ಜಮೀನಿನಲ್ಲಿ ಕೆರೆ ನಿರ್ಮಿಸಬೇಕೆಂದು ಆಗ್ರಹಿಸಿ ಅಖಂಡ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ನೇತೃತ್ವದಲ್ಲಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಬಸವನಬಾಗೇವಾಡಿ ಪಟ್ಟಣದ ಇವಣಗಿ ಕ್ರಾಸ್‌ನಿಂದ ತಹಶೀಲ್ದಾರ್ ಕಚೇರಿವರೆಗೆ ಮೆರವಣಿಗೆ ನಡೆಸಿದ ನೂರಾರು ಮಹಿಳೆಯರು ಹಾಗೂ ರೈತರು, ಕಾನ್ಯಾಳ ಗ್ರಾಮದ ಸರ್ವೆ ನಂ.155 ಮತ್ತು 156ರಲ್ಲಿರುವ ಒಟ್ಟು 43 ಎಕರೆ ಸರ್ಕಾರಿ ಜಮೀನಿನಲ್ಲಿ 20 ಎಕರೆ ಪ್ರದೇಶವನ್ನು ಕೆರೆ ನಿರ್ಮಾಣಕ್ಕಾಗಿ ಮೀಸಲಿಡಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ರೈತ ಸಂಘದ ತಾಲೂಕು ಅಧ್ಯಕ್ಷ ಉಮೇಶ ವಾಲಿಕಾರ ಮಾತನಾಡಿ, ಕಾನ್ಯಾಳ ಗ್ರಾಮದಲ್ಲಿ ಈಗಾಗಲೇ 8ರಿಂದ 9 ಎಕರೆ ಪ್ರದೇಶದಲ್ಲಿ ಬಾಂದಾರ ನಿರ್ಮಿಸಲಾಗಿದ್ದು, ಇದರಿಂದ ಅಂತರ್ಜಲ ಮಟ್ಟ ಹೆಚ್ಚಳವಾಗಲು ಸಹಕಾರಿಯಾಗಿದೆ.

ಇದೇ ಮಾದರಿಯಲ್ಲಿ ಸರ್ಕಾರಿ ಜಮೀನಿನಲ್ಲಿ ಕೆರೆ ನಿರ್ಮಿಸಿದರೆ ಗ್ರಾಮಸ್ಥರಿಗೆ ಕುಡಿಯುವ ನೀರು ಹಾಗೂ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗುವುದರ ಜತೆಗೆ ಜಾನುವಾರುಗಳಿಗೂ ನೀರಿನ ಸೌಲಭ್ಯ ಕಲ್ಪಿಸಿದಂತಾಗುತ್ತದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಕೆರೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆಯ ಬಳಿಕ ಗ್ರಾಮಸ್ಥರು ಗ್ರೇಡ್-2 ತಹಶೀಲ್ದಾರ್ ಎಸ್.ಎಚ್. ಅರಕೇರಿ ಅವರಿಗೆ ಮನವಿ ಸಲ್ಲಿಸಿ, ಕೆರೆ ನಿರ್ಮಾಣದ ಬೇಡಿಕೆಯನ್ನು ಶೀಘ್ರ ಈಡೇರಿಸುವಂತೆ ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಶಿವಪ್ಪ ಹೂಗಾರ್, ಬಸನಗೌಡ ಪಾಟೀಲ್, ರಸೂಲ್ ಸಾಬ್ ಕನ್ನೂರ್, ಮುದುಕಪ್ಪ ಚಲವಾದಿ, ಮಹಾದೇವಿ ಯರಜರಿ, ಸವಿತಾ ಚಲವಾದಿ ಸೇರಿದಂತೆ ಕಾನ್ಯಾಳ ಗ್ರಾಮದ ನೂರಾರು ಜನರು ಭಾಗವಹಿಸಿದ್ದರು.

Tags:

error: Content is protected !!