ರಾಜ್ಯದಲ್ಲಿ ನಡೀತಿರೋ ಸ್ಟಿಂಗ್ ಆಪರೇಷನ್ ಸದ್ದು, ಕಬ್ಬು ಬೆಳೆಗಾರರ ಸುದೀರ್ಘ ಹೋರಾಟ ಹಾಗೂ ಬಿಜೆಪಿ ಅಧ್ಯಕ್ಷ ಸ್ಥಾನದ ಗೊಂದಲಗಳ ಕುರಿತು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸರ್ಕಾರ ಹಾಗೂ ಸ್ವಪಕ್ಷದ ನಾಯಕರ ವಿರುದ್ಧ ಹರಿಹಾಯ್ದಿದ್ದಾರೆ. ಸಿದ್ದರಾಮಯ್ಯ ರಾಜಕೀಯ ಮುಗಿಸಲು ಹುನ್ನಾರ ನಡೆದಿದ್ದು, ಬಿ.ವೈ. ವಿಜಯೇಂದ್ರ ತಕ್ಷಣವೇ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದ್ದಾರೆ.
ರಾಜ್ಯದಲ್ಲಿ ಸ್ಟಿಂಗ್ ಆಪರೇಷನ್ ನಡೆಸುವ ಎರಡು ದೊಡ್ಡ ಕಾರ್ಖಾನೆಗಳು ಕಾರ್ಯಾಚರಿಸುತ್ತಿವೆ. ಒಂದು ಬಿಜೆಪಿ ನಾಯಕರೊಬ್ಬರ ಕಿರಿಯ ಮಗನ ಮಾರ್ಗದರ್ಶನದಲ್ಲಿದ್ದರೆ, ಇನ್ನೊಂದು ರಾಜ್ಯದ ಮುಖ್ಯಮಂತ್ರಿಗಳ ಉಸ್ತುವಾರಿಯಲ್ಲಿದೆ ಎಂದು ಯತ್ನಾಳ್ ಆರೋಪಿಸಿದರು. ಇಬ್ಬರಿಗೂ ಮಂಪರು ಪರೀಕ್ಷೆ ನಡೆಸಿದರೆ ಸತ್ಯಾಂಶ ಹೊರಬರಲಿದೆ. ಸಿದ್ದರಾಮಯ್ಯ ಅವರ ಆಪ್ತರೇ ತಿಳಿಸಿರುವಂತೆ, ಅವರ ಸಿಡಿಯನ್ನು ಹೈಕಮಾಂಡ್ಗೆ ತೋರಿಸಿ ಅವರ ರಾಜಕೀಯ ಮುಗಿಸಲು ದೊಡ್ಡ ಮಟ್ಟದ ಷಡ್ಯಂತ್ರ ಹೆಣೆಯಲಾಗಿದೆ.
ರೈತರ ಹೋರಾಟಕ್ಕೆ ತಮ್ಮ ಪೂರ್ಣ ಬೆಂಬಲವಿದೆ ಎಂದ ಯತ್ನಾಳ್, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಸಮಿತಿ ರಚಿಸಿ ರೈತರ ಮೂಗಿಗೆ ತುಪ್ಪ ಹಚ್ಚುವ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು. ಕೇಂದ್ರ ಸರ್ಕಾರ ಸಕ್ಕರೆ ಬೆಲೆಯನ್ನು ಕನಿಷ್ಠ 55 ರೂಪಾಯಿಗೆ ನಿಗದಿಪಡಿಸಿದರೆ, ಸಕ್ಕರೆ ಕಾರ್ಖಾನೆಗಳು ಪ್ರತಿ ಟನ್ಗೆ 4000 ರೂಪಾಯಿ ನೀಡಲು ಸಿದ್ಧವಿವೆ. ಪಡಿತರದಲ್ಲಿ ಅಕ್ಕಿ ಜೊತೆ ಸಕ್ಕರೆ ವಿತರಿಸಿ, ರೈತರ ಮೇಲಿನ ತೆರಿಗೆಗಳನ್ನು ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು.
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ತಕ್ಷಣ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಹಾಗೂ ಮುಂಬರುವ 10 ವರ್ಷಗಳ ಕಾಲ ತಾವು ಸಿಎಂ ಅಭ್ಯರ್ಥಿಯಲ್ಲ ಎಂದು ಬರೆದುಕೊಡಬೇಕು ಎಂದು ವ್ಯಂಗ್ಯವಾಡಿದರು. ವಿಜಯೇಂದ್ರ ಅವರ ತಂದೆ ಇತ್ತೀಚೆಗೆ ದೇವೇಗೌಡರನ್ನು ಭೇಟಿಯಾಗಿ ತಮ್ಮ ಮಗನ ಅಧ್ಯಕ್ಷ ಸ್ಥಾನ ಉಳಿಸಿಕೊಡುವಂತೆ ಮನವಿ ಮಾಡಿದ್ದಾರೆ. ಆದರೆ, ಅವರ ಈ ತಂತ್ರಗಳು ರಾಜಕೀಯ ಲಾಭಕ್ಕೆ ಸೀಮಿತವಾಗಿದ್ದು, ಪಕ್ಷದಲ್ಲೇ ತೀವ್ರ ಅಸಮಾಧಾನ ಮೂಡಿಸಿದೆ ಎಂದರು.
ಸರ್ಕಾರ ಹಾಲಿನ ದರ ಏರಿಕೆ ಮಾಡಿರುವುದನ್ನು ಸ್ವಾಗತಿಸಿದ ಶಾಸಕರು, ಏರಿಕೆಯಾದ ಪೂರ್ಣ 8 ರೂಪಾಯಿ ಹಣ ನೇರವಾಗಿ ರೈತರ ಖಾತೆಗೆ ತಲುಪಬೇಕೇ ವಿನಃ KMF ಗೆ ನೀಡಬಾರದು ಎಂದರು. ಕೆಎಂಎಫ್ನಲ್ಲಿ ದೊಡ್ಡ ಮಟ್ಟದ ಅಕ್ರಮ ನಡೆಯುತ್ತಿದ್ದು, ಸರ್ಕಾರದ ಸಾವಿರಾರು ಕೋಟಿ ರೂಪಾಯಿ ಸಬ್ಸಿಡಿ ಹಣ ದುರ್ಬಳಕೆಯಾಗುತ್ತಿದೆ. ಜನರಿಗೂ ಉತ್ತಮ ದರ್ಜೆಯ ಹಾಲು ಸಿಗಬೇಕಾದರೆ ರೈತರಿಗೆ ನೇರ ತಲುಪುವ ವ್ಯವಸ್ಥೆಯಾಗಬೇಕು ಎಂದು ಅಭಿಪ್ರಾಯಪಟ್ಟರು.
