ವಿಜಯಪುರ ಜಿಲ್ಲೆಯ ಕೃಷ್ಣಾ ನದಿ ತೀರದಲ್ಲಿರುವ ಬಾಲಾಜಿ, ಬಸವೇಶ್ವರ ಹಾಗೂ ನಂದಿ ಸಕ್ಕರೆ ಕಾರ್ಖಾನೆಗಳ ಮಾಲೀಕರು ಕಬ್ಬು ಬೆಳೆಗಾರರಿಗೆ ಪ್ರತಿ ಟನ್ ಕಬ್ಬಿಗೆ ₹3,800 ದರ ನೀಡಬೇಕು ಹಾಗೂ ಎರಡನೇ ಕಂತಿನಲ್ಲಿ ಸಕ್ಕರೆ ಮಾರಾಟದ ಆಧಾರದ ಮೇಲೆ ಲಾಭದ ಪಾಲನ್ನು ರೈತರಿಗೆ ನೀಡಬೇಕು ಎಂದು ಆಗ್ರಹಿಸಿ ರೈತ ಮುಖಂಡರು ಜಿಲ್ಲಾಧಿಕಾರಿ ಹಾಗೂ ಆಹಾರ ಇಲಾಖೆಯ ಉಪನಿರ್ದೇಶಕರಿಗೆ ಮನವಿ ಸಲ್ಲಿಸಿದರು. ಕಬ್ಬು ಬೆಳೆಗಾರರ ಹಿತದೃಷ್ಟಿಯಿಂದ ಕಾರ್ಖಾನೆ ಮಾಲೀಕರು ಕೂಡಲೇ ರೈತರ ಬೇಡಿಕೆ ಈಡೇರಿಸಬೇಕು. ಪ್ರತಿ ಟನ್ ಕಬ್ಬಿಗೆ ₹3,800 ದರ ನಿಗದಿಪಡಿಸುವುದರ ಜೊತೆಗೆ, ಸಕ್ಕರೆ ಮಾರಾಟದಿಂದ ದೊರೆಯುವ ಲಾಭವನ್ನು ಎರಡನೇ ಕಂತಿನಲ್ಲಿ ರೈತರಿಗೆ ಪಾವತಿಸಬೇಕು ಎಂದು ಒತ್ತಾಯಿಸಿದರು. ಈ ಬೇಡಿಕೆಗಳನ್ನು ಈಡೇರಿಸಲು ಕಾರ್ಖಾನೆ ಮಾಲೀಕರಿಗೆ ಎರಡು ದಿನಗಳ ಗಡುವು ನೀಡಲಾಗಿದ್ದು, ನಿಗದಿತ ಅವಧಿಯಲ್ಲಿ ಬೇಡಿಕೆ ಈಡೇರಿಸದಿದ್ದರೆ ಸಂಬಂಧಿಸಿದ ಸಕ್ಕರೆ ಕಾರ್ಖಾನೆಗಳಿಗೆ ಬೀಗ ಹಾಕಿ ಉಗ್ರ ಹೋರಾಟ ನಡೆಸಲಾಗುವುದು ಎಂದು ರೈತ ಮುಖಂಡರು ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷ ಶಾಂತಗೌಡ ಪಾಟೀಲ, ಜಿಲ್ಲಾಧ್ಯಕ್ಷ ಸಂಗಮೇಶ ಸಗರ, ಶಿವಾನಂದಯ್ಯ ಹಿರೇಮಠ, ಗುರಸಂಗಪ್ಪಗೌಡ ಅಂಡರಗಲ್ಲ, ಅಯ್ಯಣ್ಣ ಬಿದರಕುಂದಿ, ನಿಂಗಪ್ಪ ಓಲೇಕಾರ, ಲಕ್ಷಣ ತೊಂಡಿಕಟ್ಟಿ, ಮಹಾದೇವ ಕದಂ, ಅಯ್ಯಪ್ಪ ಮಡಿವಾಳರ ಸೇರಿದಂತೆ ಇತರ ರೈತ ಮುಖಂಡರು ಉಪಸ್ಥಿತರಿದ್ದರು.
