Belagavi

ಬೆಳಗಾವಿಯ ಖಡೇಬಜಾರ್‌ನಲ್ಲಿ ಒಳಚರಂಡಿ ಕಾಮಗಾರಿ:

Share

ಬೆಳಗಾವಿ ನಗರದ ಜನನಿಬಿಡ ಖಡೇಬಜಾರ್ ಪ್ರದೇಶದಲ್ಲಿ ಶಿಥಿಲಾವಸ್ಥೆಯಲ್ಲಿದ್ದ ಹಳೆಯ ಒಳಚರಂಡಿ ಪೈಪ್‌ಲೈನ್ ಅನ್ನು ತೆಗೆದು, ಹೊಸ ಪೈಪ್‌ಲೈನ್ ಅಳವಡಿಸುವ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ. ಸುರಕ್ಷತೆಯ ದೃಷ್ಟಿಯಿಂದ ಈ ಭಾಗದ ಎಲ್ಲಾ ಅಂಗಡಿಗಳು ಹಾಗೂ ವಾಣಿಜ್ಯ ಮಳಿಗೆಗಳನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದ್ದು, ಕಾಮಗಾರಿಯು ಇನ್ನೂ ಮೂರರಿಂದ ನಾಲ್ಕು ದಿನಗಳ ಕಾಲ ಮುಂದುವರಿಯುವ ಸಾಧ್ಯತೆಯಿದೆ.

ಅಗೆಯುವ ವೇಳೆ ಹಳೆಯ ಪೈಪ್‌ಲೈನ್ ಭೂಮಿಯ ಮೇಲ್ಮೈಯಿಂದ ಸುಮಾರು 13 ರಿಂದ 14 ಅಡಿಗಳಷ್ಟು ಆಳದಲ್ಲಿರುವುದು ಪತ್ತೆಯಾಗಿದ್ದು, ಇದನ್ನು ಹೊರತೆಗೆದು ಹೊಸ ಪೈಪ್ ಅಳವಡಿಸಲು ಸಿಬ್ಬಂದಿಗೆ ತೀವ್ರ ಅಡಚಣೆಯಾಗುತ್ತಿದೆ. ಇದರಿಂದಾಗಿ ಕಾಮಗಾರಿಯು ನಿರೀಕ್ಷೆಗಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತಿದೆ ಎಂದು ಸ್ಥಳದಲ್ಲಿರುವ ಕಾರ್ಮಿಕರು ಮಾಹಿತಿ ನೀಡಿದ್ದಾರೆ. ಅಲ್ಲದೆ, ರಸ್ತೆಯನ್ನು ಬೃಹತ್ ಪ್ರಮಾಣದಲ್ಲಿ ಅಗೆದಿರುವುದರಿಂದ ಸುತ್ತಲಿನ ಮಣ್ಣು ಕುಸಿಯುವ ಅಪಾಯ ಎದುರಾಗಿದ್ದು, ರಾತ್ರಿ ವೇಳೆ ಕಾಮಗಾರಿ ನಡೆಸುವುದು ಅಸಾಧ್ಯವಾಗಿದೆ. ಹೀಗಾಗಿ, ಕಾಮಗಾರಿ ಪೂರ್ಣಗೊಳ್ಳುವವರೆಗೂ ಸಾರ್ವಜನಿಕರು ಮತ್ತು ವಾಹನ ಸವಾರರು ಖಡೇಬಜಾರ್ ರಸ್ತೆಯಲ್ಲಿ ಸಂಚರಿಸುವಾಗ ಅತ್ಯಂತ ಜಾಗರೂಕರಾಗಿರಬೇಕು ಹಾಗೂ ಪರ್ಯಾಯ ಮಾರ್ಗಗಳನ್ನು ಬಳಸಬೇಕು ಎಂದು ಮನವಿ ಮಾಡಲಾಗಿದೆ.

Tags:

error: Content is protected !!