BALLARI

ಚಾಲಕನಿಗೆ ತಲೆಸುತ್ತು ಬಂದು ಕಾಂಪ್ಲೆಕ್ಸ್’ಗೆ ನುಗ್ಗಿದ ಬಸ್!!! 8 ಬೈಕ್‌ಗಳು ಜಖಂ!

Share

ಗಣಿನಾಡು ಬಳ್ಳಾರಿಯಲ್ಲಿ ಇಂದು ಭಾರೀ ಅನಾಹುತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ. ಚಲಿಸುತ್ತಿದ್ದ ಬಸ್‌ನ ಚಾಲಕನಿಗೆ ಏಕಾಏಕಿ ತಲೆಸುತ್ತು ಕಾಣಿಸಿಕೊಂಡ ಪರಿಣಾಮ, ನಿಯಂತ್ರಣ ತಪ್ಪಿದ ಬಸ್ ರಸ್ತೆ ಬದಿಯ ಕಾಂಪ್ಲೆಕ್ಸ್‌ಗೆ ನುಗ್ಗಿದೆ.

ಬಳ್ಳಾರಿ ನಗರದ ಹಳೆ ನಗರಸಭೆ ಮುಂಭಾಗದಲ್ಲಿ ಇಂದು ಈ ಭೀಕರ ಅಪಘಾತ ಸಂಭವಿಸಿದೆ. ರಸ್ತೆಯಲ್ಲಿ ಸಂಚರಿಸುತ್ತಿದ್ದ ಬಸ್ ಚಾಲಕನಿಗೆ ದಿಢೀರ್ ತಲೆಸುತ್ತು ಬಂದಿದ್ದರಿಂದ ಬಸ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಕಾಂಪ್ಲೆಕ್ಸ್‌ನತ್ತ ನುಗ್ಗಿದೆ. ಈ ವೇಳೆ ಕಾಂಪ್ಲೆಕ್ಸ್ ಮುಂಭಾಗದಲ್ಲಿ ಪಾರ್ಕಿಂಗ್ ಮಾಡಲಾಗಿದ್ದ ಬರೋಬ್ಬರಿ 8 ದ್ವಿಚಕ್ರ ವಾಹನಗಳಿಗೆ ಬಸ್ ಡಿಕ್ಕಿ ಹೊಡೆದಿದ್ದು, ಬೈಕ್‌ಗಳು ಸಂಪೂರ್ಣ ಜಖಂಗೊಂಡಿವೆ.

ಬೈಕ್‌ಗಳಿಗೆ ಡಿಕ್ಕಿ ಹೊಡೆದ ರಭಸಕ್ಕೆ ಬಸ್ ಅಂಗಡಿಯೊಳಗೆ ನುಗ್ಗದೆ ಅಲ್ಲೇ ನಿಂತಿದ್ದರಿಂದ ಭಾರೀ ದುರಂತವೊಂದು ತಪ್ಪಿದಂತಾಗಿದೆ. ಒಂದು ವೇಳೆ ಬಸ್ ಅಂಗಡಿಯೊಳಗೆ ನುಗ್ಗಿದ್ದರೆ ದೊಡ್ಡ ಮಟ್ಟದ ಪ್ರಾಣಹಾನಿ ಸಂಭವಿಸುವ ಸಾಧ್ಯತೆ ಇತ್ತು. ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲವಾದರೂ, ಅಸ್ವಸ್ಥಗೊಂಡಿರುವ ಬಸ್ ಚಾಲಕನನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದಿಂದಾಗಿ ಕೆಲಕಾಲ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿದ್ದು, ಸ್ಥಳಕ್ಕೆ ಧಾವಿಸಿದ ಟ್ರಾಫಿಕ್ ಪೊಲೀಸರು ವಾಹನಗಳನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಸದ್ಯ ಈ ಕುರಿತು ಬಳ್ಳಾರಿಯ ಬ್ರೂಸ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:

error: Content is protected !!