ಹೊಲಕ್ಕೆ ಎತ್ತುಗಳು ನುಗ್ಗಿದ ಸಣ್ಣ ವಿಚಾರಕ್ಕೆ ಹುಕ್ಕೇರಿ ತಾಲೂಕಿನ ಅರಳಿಕಟ್ಟಿ ಗ್ರಾಮದಲ್ಲಿ ಯುವಕನೊಬ್ಬನ ಮೇಲೆ ಕೊಡಲಿಯಿಂದ ಹಲ್ಲೆ ನಡೆಸಲಾಗಿದೆ.

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಅರಳಿಕಟ್ಟಿ ಗ್ರಾಮದಲ್ಲಿ ಎತ್ತುಗಳು ಹತ್ತಿ ಹೊಲಕ್ಕೆ ನುಗ್ಗಿದ ವಿಚಾರವಾಗಿ ನಡೆದ ವಾಗ್ವಾದವು ಉಲ್ಬಣಗೊಂಡು, ಜಮೀನು ಮಾಲೀಕರ ಮೇಲೆ ಮಾರಣಾಂತಿಕ ಹಲ್ಲೆ ನಡೆದಿರುವ ದಾರುಣ ಘಟನೆ ಯಮಕನಮರಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಹೊಲದಲ್ಲಿದ್ದ ಹತ್ತಿ ಬೆಳೆಯನ್ನು ಎತ್ತುಗಳು ತಿಂದು ಹಾಳು ಮಾಡಿವೆಯೆಂದು ಆಕ್ರೋಶಗೊಂಡ ಸಿದ್ದಪ್ಪ ಪಾಟೀಲ ಹಾಗೂ ಇತರರು ಪ್ರಭು ಪಾಟೀಲ ಅವರೊಂದಿಗೆ ಜಗಳವಾಡಿದ್ದಾರೆ. ಈ ವೇಳೆ ಪರಿಸ್ಥಿತಿ ವಿಕೋಪಕ್ಕೆ ತಿರುಗಿ, ಪ್ರಭು ಪಾಟೀಲ ಅವರ ತಲೆಗೆ ಕೊಡಲಿ ಹಾಗೂ ಕಟ್ಟಿಗಳಿಂದ ಮನಬಂದಂತೆ ಹಲ್ಲೆ ನಡೆಸಲಾಗಿದ್ದು, ಗಂಭೀರವಾಗಿ ಗಾಯಗೊಂಡಿರುವ ಅವರನ್ನು ತುರ್ತು ಚಿಕಿತ್ಸೆಗಾಗಿ ಬೆಳಗಾವಿಯ ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಕುರಿತು ಯಮಕನಮರಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
