Belagavi

ನಾಡಹಬ್ಬ ದಸರಾ ನಮ್ಮ ಭಾಷೆ, ಸಂಸ್ಕೃತಿಯ ಪ್ರತೀಕ: ಪ್ರಾದೇಶಿಕ ಆಯುಕ್ತೆ ಕೆ.ಎಂ. ಜಾನಕಿ ಅಭಿಮತ

Share

ನಮ್ಮಲ್ಲಿ ನಡೆಯುವ ಪ್ರತಿಯೊಂದು ಆಚರಣೆ, ಹಬ್ಬ, ಉತ್ಸವಗಳಿಗೆ ಅದರದ್ದೇಯಾದ ಒಂದು ಹಿನ್ನೆಲೆ, ಇತಿಹಾಸ ಇದ್ದೇ ಇರುತ್ತದೆ. ಆದರೆ, ದೇವಿ ಆರಾಧನೆಯ ಜತೆಗೆ ನಾಡಿನ ಪರಂಪರೆಯ ಪ್ರತೀಕವಾದ ನಾಡಹಬ್ಬವಾಗಿ ಆಚರಣೆಯಾಗುವುದು ನವರಾತ್ರಿಯ ದಸರಾ ಮಾತ್ರ. ಈ ಹಬ್ಬದ ಮೂಲಕ ನಮ್ಮ ಭಾಷೆ, ನುಡಿ, ಸಾಹಿತ್ಯ, ಸಂಸ್ಕೃತಿಯನ್ನು ಉಳಿಸಿಕೊಂಡು ಹೋಗುವ ಕೆಲಸವನ್ನು ಮೊದಲಿನಿಂದಲೂ ಮಾಡಿಕೊಂಡು ಬರಲಾಗುತ್ತಿದ ಎಂದು ಪ್ರಾದೇಶಿಕ ಆಯುಕ್ತೆ ಕೆ.ಎಂ.ಜಾನಕಿ ಹೇಳಿದರು.

ನಗರದ ಕನ್ನಡ ಸಾಹಿತ್ಯ ಭವನದ ಆವರಣದಲ್ಲಿ ಆಯೋಜಿಸಿರುವ 99ನೇ ನಾಡಹಬ್ಬ ಉತ್ಸವವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ನಾಡಿನಲ್ಲಿ ಒಂದು ಹೆಮ್ಮೆಯ ಕನ್ನಡದ ಹಬ್ಬವಾಗಿ ನಾಡಹಬ್ಬ ಬೆಳೆದು ಬಂದಿದೆ. ಇದಕ್ಕೆ ಮೈಸೂರು ಮಹಾರಾಜರು ಪ್ರೇರಣೆಯಾಗಿದ್ದಾರೆ. ಬೆಳಗಾವಿಯಂತಹ ಪ್ರದೇಶದಲ್ಲಿ ಭಾಷೆ ಮತ್ತು ಕನ್ನಡ ಸಾಹಿತ್ಯವನ್ನು ಉಳಿಸಿಕೊಂಡು ಹೋಗಲು ಕಳೆದ 99 ವರ್ಷಗಳಿಂದ ಸ್ಥಳೀಯರೆಲ್ಲ ವೈಯಕ್ತಿಕ ಸಂಪನ್ಮೂಲ ಕ್ರೋಢಿಕರೀಸಿ ಐದು ದಿನಗಳ ಉತ್ಸವ ಮಾಡುತ್ತ ಬಂದಿರುವುದು ಶ್ಲಾಘನೀಯ ಕಾರ್ಯ ಎಂದರು.

ನಾಡ ಹಬ್ಬದಲ್ಲಿ ದೇವಿಯ ಆರಾಧನೆಯನ್ನೇ ಮಾಡಿದರೂ, ಮುಖ್ಯವಾಗಿ ಪ್ರಕೃತಿಯ ಆರಾಧನೆಯೇ ನಡೆಯುತ್ತದೆ. ನಮ್ಮಲ್ಲಿ ಬರುವ ಬಹುತೇಕ ಎಲ್ಲ ಹಬ್ಬಗಳ ಹಿನ್ನೆಲೆಯಲ್ಲಿ ಪ್ರಕೃತಿಯ ಆರಾಧನೆಯಿದೆ. ಇದೊಂದು ರೀತಿಯಲ್ಲಿ ಕೃತಜ್ಞತೆ ಸಲ್ಲಿಸುವ ಪರಂಪರೆಯಾಗಿದೆ. ನಮ್ಮ ಪೂರ್ವಿಕರು, ನಮಗಾಗಿ ಇರುವ ಪ್ರಕೃತಿಗೆ ಹಬ್ಬಗಳ ಮೂಲಕ ಕೃತಜ್ಞತೆ ಸಲ್ಲಿಸುತ್ತ, ಸಾಧಕರನ್ನು ಗೌರವಿಸುವ ಕಾರ್ಯ ಮಾಡುತ್ತ ಬಂದಿದ್ದರು. ಅದರ ಪ್ರತೀಕವಾಗಿಯೇ ಇಂದು ನಮ್ಮಲ್ಲಿ ಹಬ್ಬ, ಹರಿದಿನಗಳಲ್ಲಿ ವಿವಿಧ ಕ್ರೀಡಾಸ್ಪರ್ಧೆಗಳು, ಸಾಧಕರ ಗೌರವ ನಡೆಯುತ್ತ ಬಂದಿದೆ ಎಂದು ವಿವರಿಸಿದರು.

ಗದುಗಿನ ತೋಂಟದಾರ್ಯ ಮಠದ ಡಾ.ಸಿದ್ಧರಾಮ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ನಿವೃತ್ತ ಪ್ರಾಚಾರ್ಯ ಡಾ.ಬಸವರಾಜ ಜಗಜಂಪಿ ವಂದೇ ಮಾತರಂ ವಿಷಯ ಕುರಿತು ಉಪನ್ಯಾಸ ನೀಡಿದರು. ಸಂಸದ ಜಗದೀಶ ಶೆಟ್ಟರ, ಉತ್ಸವ ಸಮಿತಿ ಅಧ್ಯಕ್ಷ ಡಾ.ಎಚ್.ಬಿ.ರಾಜಶೇಖರ, ಪ್ರಧಾನ ಕಾರ್ಯದರ್ಶಿ ಸಿ.ಕೆ.ಜೋರಾಪುರ, ಡಾ.ಎಚ್.ಐ. ತಿಮ್ಮಾಪುರ, ಆರ್.ಪಿ.ಪಾಟೀಲ, ವಿ.ಕೆ.ಪಾಟೀಲ, ಸೋಮಲಿಂಗ ಮಾವಿನಕಟ್ಟಿ ಇತರರಿದ್ದರು.

Tags:

error: Content is protected !!