State

ಸ್ಟಿಂಗ್ ಆಪರೇಷನ್ ವಿವಾದ: ನನ್ನನ್ನೇ ಬಂಧಿಸಿ, ಜೆಡಿಎಸ್ ಕಾರ್ಯಕರ್ತರನ್ನು ಬಿಡುಗಡೆ ಮಾಡಿ; ಪೊಲೀಸ್ ಆಯುಕ್ತರ ಕಚೇರಿ ಮುಂದೆ ಎಚ್.ಡಿ. ಕುಮಾರಸ್ವಾಮಿ ಧರಣಿ!

Share

ಸ್ಟಿಂಗ್ ಆಪರೇಷನ್ ವಿಚಾರದ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಇದರಲ್ಲಿ ಬಂಧಿಸುವುದಾದರೆ ನನ್ನನ್ನೇ ಬಂಧಿಸಿ. ಜೆಡಿಎಸ್ ಪಕ್ಷದ ಕಾರ್ಯಕರ್ತರಿಗೆ ತೊಂದರೆ ನೀಡಬೇಡಿ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ನಗರ ಪೊಲೀಸ್ ಆಯುಕ್ತರಿಗೆ ಆಗ್ರಹಿಸಿದರು. ಇದೇ ವಿಚಾರವಾಗಿ ಕಮಿಷನರ್ ಕಚೇರಿ ಮುಂಭಾಗದ ಮೆಟ್ಟಿಲುಗಳ ಮುಂದೆ ಕುಳಿತು ಕುಮಾರಸ್ವಾಮಿ ಕೆಲಕಾಲ‌ ಧರಣಿ ನಡೆಸಿದರು.

ಇದಕ್ಕೂ ಮುನ್ನ, ಜೆಡಿಎಸ್ ಕಾರ್ಯಕರ್ತರನ್ನು ವಶಕ್ಕೆ ಪಡೆದಿರುವ ವಿಚಾರ ಸಂಬಂಧ ಶೇಷಾದ್ರಿಪುರಂ ರಸ್ತೆಯಲ್ಲಿರುವ ಜೆಡಿಎಸ್ ಕಚೇರಿಯಲ್ಲಿ ಮಾಧ್ಯಮಗೋಷ್ಟಿ ನಡೆಸಿ ರಾಜ್ಯ ಸರ್ಕಾರ ವಿರುದ್ಧ ಕಿಡಿಕಾರಿದ್ದರು. ಸ್ಟಿಂಗ್ ವಿಚಾರ ಪ್ರಸ್ತಾಪ ಮಾಡಿದ್ದು, ಜೆಡಿಎಸ್ ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದು ಯಾಕೆ? ಎಂದು ಪ್ರಶ್ನಿಸಿದ ಹೆಚ್ಡಿಕೆ, ಮಾಧ್ಯಮಗೋಷ್ಟಿ ಮುಗಿಸಿ ನೇರವಾಗಿ ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಅವರ ಕಚೇರಿಗೆ ಬಂದು ಪ್ರಶ್ನಿಸಿದರು.

ಪ್ರಾಮಾಣಿಕ ತನಿಖೆ ನಡೆಸುವಂತೆ ಧರಣಿನಿರತರಾಗಿದ್ದ ಕುಮಾರಸ್ವಾಮಿ ಅವರನ್ನು ಮನವೊಲಿಸಲು ಯತ್ನಿಸಿದರು. ಬಂಧಿಸುವುದಾದರೆ ನನ್ನನ್ನೇ ಬಂಧಿಸಿ. ಸುಖಾಸುಮ್ಮನೆ ನಮ್ಮ‌ ಕಾರ್ಯಕರ್ತರಿಗೆ ತೊಂದರೆ ಕೊಡಬೇಡಿ. ಹೇಗಾದರೂ ಮಾಡಿ ನನ್ನ ಹೆಸರು ಬರುವ ಪ್ಲಾನ್ ಅಲ್ಲವೇ? ಹಾಗಿದ್ದರೆ ಈಗ ಬಂದಿರುವೆ, ನನ್ನನ್ನ ಬಂಧಿಸಿ ಎಂದು ಒತ್ತಾಯಿಸಿದರು. ಸ್ಟಿಂಗ್ ವಿಚಾರವಾಗಿ ಸಿದ್ದರಾಮಯ್ಯ ಅವರು ಮೌನ ವಹಿಸಿರುವುದು ನನಗೆ ಆಶ್ಚರ್ಯ ತಂದಿದೆ ಎಂದರು.
ಒತ್ತಡಕ್ಕೆ ಮಣಿಯದೆ ಪ್ರಾಮಾಣಿಕ ತನಿಖೆ ಮಾಡುತ್ತೇವೆ ಎಂದು ಕಮಿಷನರ್ ಹೇಳುತ್ತಿದ್ದಾರೆ. ಅವರ ಪರಿಸ್ಥಿತಿ ನನಗೆ ಅರ್ಥವಾಗುತ್ತದೆ. ಪ್ರಾಮಾಣಿಕ ಅಧಿಕಾರಿಗಳಿದ್ದಾರೆ. ಆದರೆ ಈ ಸರ್ಕಾರದಲ್ಲಿ ಪ್ರಾಮಾಣಿಕರಿಗೆ ಗೌರವ ಇಲ್ಲದಂತಾಗಿದೆ. ನಿನ್ನೆ ನಮ್ಮ ಕಾರ್ಯಕರ್ತರನ್ನು ಕರೆದುಕೊಂಡು ಹೋಗಿ ಏನ್ ಮಾಡಿದ್ದಾರೆ. ಅವರನ್ನು ಹೆದರಿಸಿ ಬೇಕಾದ ರೀತಿ ಬರೆಸಿಕೊಳ್ಳಲು ಹೋಗಿದ್ದಾರೆ‌‌‌, ಅದಕ್ಕೆಲ್ಲ ನಾನು ಹೆದರುವ ಮನುಷ್ಯ ಅಲ್ಲ ಎಂದು ಎಚ್ಚರಿಕೆ ನೀಡಿದರು.
ಪ್ರಕರಣ ಸಂಬಂಧ ತಪ್ಪಿತಸ್ಥರನ್ನು ಎರಡು ದಿನದೊಳಗೆ ಬಂಧಿಸಬೇಕು. ಒಂದು ವೇಳೆ ಅರೆಸ್ಟ್ ಮಾಡದಿದ್ದರೆ ಮುಂದಿನ ಕ್ರಮ ಕೈಗೊಳ್ಳುತ್ತೇನೆ‌. ನಿಮಗೋಸ್ಕರ ಗೌರವ ಕೊಟ್ಟು ಧರಣಿ ಹಿಂಪಡೆದು ತೆರಳುವುದಾಗಿ ಆಯುಕ್ತರಿಗೆ ಕುಮಾರಸ್ವಾಮಿ ತಿಳಿಸಿದರು.

ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಹೆಚ್ಡಿಕೆ, ಆಯುಕ್ತರ ಮನವಿ ಮೇರೆಗೆ ಧರಣಿ ಹಿಂಪಡೆಯಲಾಗಿದೆ. ಬಂಧನ ವಿಚಾರವಾಗಿ ಸರ್ಕಾರದಿಂದ ಯಾವುದೇ ಭರವಸೆ ನೀಡಿಲ್ಲ‌. ಮಾಧ್ಯಮದ ಹೆಸರಿನಲ್ಲಿ ಕೆಲ ವ್ಯಕ್ತಿಗಳು ದುರುಪಯೋಗಪಡಿಸಿಕೊಂಡಿದ್ದಾರೆ. ರಣದೀಪ್ ಸುರ್ಜೇವಾಲಾ ಅವರೊಂದಿಗೆ ಆತ್ಮೀಯವಾಗಿ ಗುರುತಿಸಿಕೊಂಡಿರುವ ವ್ಯಕ್ತಿಯ ಪ್ರಕರಣದಲ್ಲಿ ನನ್ನ ಹೆಸರು ತಳಕು ಹಾಕಲು ಯತ್ನಿಸಲಾಗಿದೆ. ಅವರದ್ದೇ ತಂಡ ಕಟ್ಟಿಕೊಂಡು ಸ್ಟಿಂಗ್ ವಿಚಾರವಾಗಿ‌ ತಂಡ ಕಟ್ಟಿದ್ದಾರೆ ಎಂದು ಹೇಳಿ‌ ಮೊಬೈಲ್‌ನಲ್ಲಿದ್ದ ಸುರ್ಜೇವಾಲಾ ಅವರೊಂದಿಗೆ ಗುರುತಿಸಿಕೊಂಡಿದ್ದಾರೆ ಎನ್ನಲಾದ ವ್ಯಕ್ತಿಯ ಫೋಟೋ ತೋರಿಸಿ ಅಸಮಾಧಾನ ವ್ಯಕ್ತಪಡಿಸಿದರು.

ಸ್ಟಿಂಗ್ ವಿಚಾರ ಸಂಬಂಧ ಸಿಬಿಐ ತನಿಖೆಗೆ‌ ಒಳಪಡಿಸಬೇಕೆಂದು ನನ್ನ ವೈಯಕ್ತಿಕ ನಿಲುವು‌. ಇಲ್ಲದಿದ್ದರೆ ನ್ಯಾಯಧೀಶರೊಬ್ಬರ ನೇತೃತ್ವದಲ್ಲಿ ತನಿಖಾ ಸಮಿತಿ ರಚಿಸಬೇಕು ಎಂದು ಮಾಧ್ಯಮಗಳ ಪ್ರಶ್ನೆಯೊಂದಕ್ಕೆ ಕುಮಾರಸ್ವಾಮಿ ಉತ್ತರಿಸಿದರು.

Tags:

error: Content is protected !!