ಬೆಳಗಾವಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಮೊಹ್ಮದ್ ರೋಷನ್ ಹಾಗೂ ನಗರ ಪೊಲೀಸ್ ಆಯುಕ್ತ ಪ್ರಕಾಶ್ ನಿಕಮ್ ಅವರು ಖುದ್ದು ಭೇಟಿ ನೀಡಿ ರೈತರ ಸಮಸ್ಯೆಗಳನ್ನು ಆಲಿಸಿದ್ದಾರೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಹಾಗೂ ಸ್ಥಳೀಯ ಜಿಲ್ಲಾಡಳಿತ ಯಾವಾಗಲೂ ರೈತರ ಪರವಾಗಿದ್ದು, ರೈತಾಪಿ ವರ್ಗದ ಹಿತಾಸಕ್ತಿ ಕಾಪಾಡಲು ಆಡಳಿತ ಯಂತ್ರ ಸದಾ ನಿಮ್ಮೊಂದಿಗೆ ಇರಲಿದೆ ಎಂದಿದ್ದಾರೆ.

ಕಬ್ಬು ಬೆಳೆಗಾರರ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಮೊಹ್ಮದ್ ರೋಷನ್ ಅವರು ರೈತ ಮುಖಂಡ ಚೂನ್ನಪ್ಪ ಪೂಜಾರಿ ಅವರ ಮಾತುಗಳನ್ನು ಮುಕ್ತಕಂಠದಿಂದ ಪ್ರಶಂಸಿಸಿದರು. ರೈತರು ತಮ್ಮ ಸಮಸ್ಯೆಗಳನ್ನು ಯಾವುದೇ ಗೊಂದಲವಿಲ್ಲದೆ, ಬಹಳ ಸ್ಪಷ್ಟವಾಗಿ, ಸರಳವಾಗಿ ಮತ್ತು ಎಲ್ಲರಿಗೂ ಅರ್ಥವಾಗುವ ಭಾಷೆಯಲ್ಲಿ ಸರ್ಕಾರದ ಮುಂದಿಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಇಂತಹ ರಚನಾತ್ಮಕ ಮತ್ತು ಸ್ಪಷ್ಟವಾದ ನಿಲುವುಗಳು ಆಡಳಿತ ಯಂತ್ರಕ್ಕೆ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲು ಮತ್ತು ತ್ವರಿತವಾಗಿ ಸ್ಪಂದಿಸಲು ಬಹಳಷ್ಟು ಸಹಕಾರಿಯಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು. ರೈತರ ಪ್ರಮುಖ ಬೇಡಿಕೆಗಳು ಕೇವಲ ಜಿಲ್ಲಾ ಮಟ್ಟಕ್ಕೆ ಮಾತ್ರ ಸೀಮಿತವಾಗಿಲ್ಲ ಎಂದು ಸ್ಪಷ್ಟಪಡಿಸಿದ ಡಿಸಿ ಮೊಹಮ್ಮದ್ ರೋಷನ್, ಈ ಗಂಭೀರ ವಿಚಾರಗಳು ರಾಜ್ಯದ ಸಕ್ಕರೆ ಸಚಿವರು, ಮುಖ್ಯಮಂತ್ರಿಗಳು, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ಹಾಗೂ ಸ್ವತಃ ಪ್ರಧಾನ ಮಂತ್ರಿಯವರಿಗೂ ತಲುಪಿವೆ ಎಂದು ತಿಳಿಸಿದರು. ಸರ್ಕಾರದ ಉನ್ನತ ಮಟ್ಟದಲ್ಲಿ ಈ ಕುರಿತು ಗಂಭೀರ ಚಿಂತನೆಗಳು ನಡೆಯುತ್ತಿದ್ದು, ಮುಂದಿನ ಎರಡು-ಮೂರು ದಿನಗಳಲ್ಲಿ ರೈತರಿಗೂ ಹಾಗೂ ದೇಶಕ್ಕೆ ಒಟ್ಟಾರೆಯಾಗಿ ಅನುಕೂಲವಾಗುವಂತಹ ಒಂದು ಅತ್ಯುತ್ತಮ ಯೋಜನೆ ರೂಪುಗೊಳ್ಳಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.

ಹಿಂದೆ ನಡೆದ ಗುರಲಾಪುರ ಹೋರಾಟದ ಸಂದರ್ಭದಲ್ಲೂ ರೈತರು ಅತ್ಯಂತ ಶಾಂತಿಯುತವಾಗಿ ಮತ್ತು ಸ್ಪಷ್ಟವಾಗಿ ತಮ್ಮ ಬೇಡಿಕೆಗಳನ್ನು ಮಂಡಿಸಿದ್ದರಿಂದ ಉತ್ತಮ ಪರಿಹಾರ ದೊರೆತಿತ್ತು ಎಂಬುದನ್ನು ಡಿಸಿ ನೆನಪಿಸಿದರು. ಅದೇ ರೀತಿಯ ಶಾಂತಿಯುತ ಹಾಗೂ ವ್ಯವಸ್ಥಿತ ಹೋರಾಟದಿಂದ ಮಾತ್ರ ಯಶಸ್ಸು ಸಾಧ್ಯ ಎಂದರು. ಶೀಘ್ರದಲ್ಲೆ ಸಕ್ಕರೆ ಕಾರ್ಖಾನೆಗಳ ಸಭೆಯನ್ನು ಕರೆಯಲಾಗುವುದು ಎಂದರು. ಪ್ರತಿಭಟನಾ ನಿರತ ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲು ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಬದ್ಧವಾಗಿದೆ. ಪ್ರತಿಭಟನಾಕಾರರಿಗೆ ಕುಡಿಯುವ ನೀರಿನ ಟ್ರಕ್ ವ್ಯವಸ್ಥೆಯನ್ನು ಈಗಾಗಲೇ ಪರಿಶೀಲಿಸಲಾಗಿದ್ದು, ಅಗತ್ಯವಿರುವ ಎಲ್ಲ ಕಡೆಗಳಲ್ಲಿಯೂ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಕೊಡಲಾಗುವುದು ಎಂದು ಭರವಸೆ ನೀಡಿದರು. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಹಾಗೂ ಸ್ಥಳೀಯ ಜಿಲ್ಲಾಡಳಿತ ಯಾವಾಗಲೂ ರೈತರ ಪರವಾಗಿದ್ದು, ರೈತಾಪಿ ವರ್ಗದ ಹಿತಾಸಕ್ತಿ ಕಾಪಾಡಲು ಆಡಳಿತ ಯಂತ್ರ ಸದಾ ನಿಮ್ಮೊಂದಿಗೆ ಇರಲಿದೆ ಎಂದು ಪೊಲೀಸ್ ಆಯುಕ್ತ ಪ್ರಕಾಶ್ ನಿಕಮ್ ಹಾಗೂ ಡಿಸಿ ಮೊಹ್ಮದ್ ರೋಷನ್ ಸ್ಪಷ್ಟಪಡಿಸಿದರು.
