Chikkodi

ಶಾರ್ಟ್ ಸರ್ಕ್ಯೂಟ್ – ಭೀಕರ ಅಗ್ನಿ ದುರಂತ, ಬಡ ಕುಟುಂಬ ಕಣ್ಣೀರು

Share

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ನಾಗರಮುನ್ನೋಳಿ ಗ್ರಾಮದಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತವೊಂದರಲ್ಲಿ ಬಡ ಕುಟುಂಬವೊಂದು ಲಕ್ಷಾಂತರ ರೂಪಾಯಿ ಮೌಲ್ಯದ ಆಸ್ತಿ-ಪಾಸ್ತಿ ಕಳೆದುಕೊಂಡು ಬೀದಿಗೆ ಬಿದ್ದಿದೆ.

ಗ್ರಾಮದ ಅಂಬೇಡ್ಕರ್ ನಗರದ ನಿವಾಸಿಗಳಾದ ಮಾರುತಿ ಕೋಟೆ ಹಾಗೂ ಶ್ರವಣ ಕೋಟೆ ಅವರಿಗೆ ಸೇರಿದ ಮನೆಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಮನೆಯಲ್ಲಿ ಸಂಭವಿಸಿದ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಕಾರಣದಿಂದ ದಿಢೀರ್ ಬೆಂಕಿ ಕಾಣಿಸಿಕೊಂಡಿದ್ದು, ಕ್ಷಣಾರ್ಧದಲ್ಲಿ ಇಡೀ ಮನೆಗೆ ವ್ಯಾಪಿಸಿದೆ.

ಅಗ್ನಿ ದುರಂತದ ತೀವ್ರತೆಗೆ ಮನೆಯಲ್ಲಿದ್ದ ಮೂರು ಟೇಜರಿಗಳು, ಒಂದು ಫ್ರಿಡ್ಜ್, ಸೋಫಾ ಸೆಟ್ ಸೇರಿದಂತೆ ಹಲವು ಗೃಹೋಪಯೋಗಿ ಬೆಲೆಬಾಳುವ ವಸ್ತುಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿವೆ. ಅಷ್ಟೇ ಅಲ್ಲದೆ, ಮನೆಯ ಮೇಲ್ಛಾವಣಿಯೂ ಸಹ ಬೆಂಕಿಯ ಕೆನ್ನಾಲಿಗೆಗೆ ಆಹುತಿಯಾಗಿದೆ.

ಮನೆಯಲ್ಲಿ ಬೆಂಕಿ ಕಾಣಿಸಿಕೊಂಡು ಎಲ್ಲವೂ ಭಸ್ಮವಾಗಿರುವುದರಿಂದ, ಸುಮಾರು 10 ರಿಂದ 15 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳು ಹಾಗೂ ಮನೆಯಲ್ಲಿದ್ದ ನಗದು ಹಣ ಸುಟ್ಟುಹೋಗಿದೆ ಎಂದು ಪ್ರಾಥಮಿಕವಾಗಿ ಅಂದಾಜಿಸಲಾಗಿದೆ. ಕಷ್ಟಪಟ್ಟು ಬೆವರು ಹರಿಸಿ ಕಟ್ಟಿಕೊಂಡಿದ್ದ ಕನಸಿನ ಮನೆ ಹೀಗೆ ಕಣ್ಣೆದುರಲ್ಲೇ ಸುಟ್ಟುಹೋಗಿರುವುದನ್ನು ಕಂಡು ನೊಂದ ಕುಟುಂಬವು ದಿಕ್ಕುದೆಚೆ ತೋಚದೆ ಕಣ್ಣೀರಿನಲ್ಲಿ ಕೈತೊಳೆಯುತ್ತಿದೆ.

ಈಗಾಗಲೇ ಸಂಕಷ್ಟದಲ್ಲಿದ್ದ ಬಡ ಕುಟುಂಬಕ್ಕೆ ಈ ಅಗ್ನಿ ದುರಂತವು ಗಾಯದ ಮೇಲೆ ಬರೆ ಎಳೆದಂತೆ ಮತ್ತಷ್ಟು ಆರ್ಥಿಕ ಹೊರೆಯನ್ನುಂಟು ಮಾಡಿದೆ. ಆದ್ದರಿಂದ, ಸಂಬಂಧಪಟ್ಟ ಕಂದಾಯ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳು ಕೂಡಲೇ ಸ್ಥಳ ಪರಿಶೀಲನೆ ನಡೆಸಿ, ಹಾನಿಯ ಸಮಗ್ರ ವರದಿ ಪಡೆದು, ಸರ್ಕಾರದ ಮೂಲಕ ನೊಂದ ಕುಟುಂಬಕ್ಕೆ ತುರ್ತಾಗಿ ಸೂಕ್ತ ಪರಿಹಾರವನ್ನು ಒದಗಿಸಬೇಕು ಎಂದು ಸ್ಥಳೀಯ ಸಾರ್ವಜನಿಕರು ಒತ್ತಾಯಿಸಿದ್ದಾರೆ.

Tags:

error: Content is protected !!