Dharwad

ಧಾರವಾಡ: ಯರಿಕೊಪ್ಪದಲ್ಲಿ ರೈತರ ಹೆದ್ದಾರಿ ತಡೆ ವಾಪಸ್; ಸಂಚಾರ ಪುನರಾರಂಭ, ರಸ್ತೆ ಬದಿಯ ಟೆಂಟ್‌ನಲ್ಲಿ ಮುಂದುವರೆದ ಧರಣಿ

Share

ಕಬ್ಬಿಗೆ ಸೂಕ್ತ ಬೆಂಬಲ ಬೆಲೆ (MSP) ನಿಗದಿಪಡಿಸುವುದು ಸೇರಿದಂತೆ ವಿವಿಧ ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕರೆ ನೀಡಿದ್ದ ರಾಷ್ಟ್ರೀಯ ಹೆದ್ದಾರಿ ಬಂದ್‌ ಪ್ರತಿಭಟನೆಯನ್ನು ಹಿಂಪಡೆಯಲಾಗಿದೆ. ಧಾರವಾಡ ಸಮೀಪದ ಯರಿಕೊಪ್ಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಳೆದ ಎರಡು ದಿನಗಳಿಂದ ರೈತರು ನಡೆಸುತ್ತಿದ್ದ ಪ್ರತಿಭಟನೆ ಅಂತ್ಯಗೊಂಡಿದ್ದು, ಹೆದ್ದಾರಿಯಲ್ಲಿ ಈಗ ವಾಹನ ಸಂಚಾರ ಸಂಪೂರ್ಣ ಮುಕ್ತವಾಗಿದೆ.

ಕಳೆದ ಮಂಗಳವಾರದಿಂದ ಧಾರವಾಡದ ಯರಿಕೊಪ್ಪದಲ್ಲಿ ರೈತರು ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸುತ್ತಿದ್ದು, ಇಂದು ಎರಡನೇ ದಿನಕ್ಕೂ ಧರಣಿ ಮುಂದುವರಿದಿತ್ತು. ಆದರೆ, ಸಂಜೆ ವೇಳೆ ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಚುನ್ನಪ್ಪ ಪೂಜಾರಿ ಅವರ ನೇತೃತ್ವದಲ್ಲಿ ಬೆಳಗಾವಿಯಿಂದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರ ನಿವಾಸದತ್ತ ‘ಪಾದಯಾತ್ರೆ’ ಆರಂಭವಾಯಿತು. ಈ ಹಿನ್ನೆಲೆಯಲ್ಲಿ, ಹೆದ್ದಾರಿ ತಡೆ ಪ್ರತಿಭಟನೆಯನ್ನು ಕೈಬಿಟ್ಟಿರುವ ರೈತರು, ಈಗ ರಸ್ತೆ ಬದಿಯಲ್ಲಿ ಟೆಂಟ್ ಹಾಕಿ ಧರಣಿ ಮುಂದುವರಿಸಿದ್ದಾರೆ. ಬೆಳಗಾವಿಯಿಂದ ಹೊರಟಿರುವ ಪಾದಯಾತ್ರೆ ಧಾರವಾಡ ತಲುಪುವವರೆಗೂ ರೈತರು ಯರಿಕೊಪ್ಪದ ಬಳಿಯ ಟೆಂಟ್‌ನಲ್ಲೇ ಪ್ರತಿಭಟನೆ ನಡೆಸಲಿದ್ದು, ಸುಮಾರು ಎರಡು ದಿನಗಳ ನಂತರ ಯರಿಕೊಪ್ಪ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಮತ್ತೆ ಸಂಚಾರ ಆರಂಭವಾಗಿದೆ.

Tags:

error: Content is protected !!