ಕಾಗವಾಡ ತಾಲೂಕಿನ ಉಗಾರ್ ಸಕ್ಕರೆ ಕಾರ್ಖಾನೆಯ ಇಥೆನಾಲ್ ಘಟಕವು ಪರಿಸರ ಮಾಲಿನ್ಯ ನಿಯಮಗಳನ್ನು ಉಲ್ಲಂಘಿಸಿದೆ ಎಂಬ ಕಾರಣಕ್ಕಾಗಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಏಕಪಕ್ಷೀಯವಾಗಿ ಸ್ಥಗಿತ ಆದೇಶ ನೀಡಿರುವುದನ್ನು ವಿರೋಧಿಸಿ, ಲಕ್ಷಾಂತರ ರೈತರು ಹಾಗೂ ಸಾವಿರಾರು ಕಾರ್ಮಿಕರು ಶುಕ್ರವಾರ ಕಾಗವಾಡದಲ್ಲಿ ಉಗ್ರ ಪ್ರತಿಭಟನೆ ಹಮ್ಮಿಕೊಂಡರು.


ಉಗಾರ್ ಸಕ್ಕರೆ ಕಾರ್ಖಾನೆಯ ಕಾರ್ಮಿಕರ ಸಂಘಟನೆಯ ವತಿಯಿಂದ ಈ ಪ್ರತಿಭಟನೆ ನಡೆಯಿತು. ಕಾರ್ಖಾನೆಯ ಮುಖ್ಯ ದ್ವಾರದಿಂದ ಆರಂಭವಾದ ರ್ಯಾಲಿಯಲ್ಲಿ ಪುರುಷ ಹಾಗೂ ಮಹಿಳಾ ಕಾರ್ಮಿಕರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಡಾ. ಜೋಗ್ ರಸ್ತೆ ಮೂಲಕ ರಾಣಿ ಚೆನ್ನಮ್ಮ ವೃತ್ತ ತಲುಪಿದರು. ಅಲ್ಲಿಂದ ಪುರಸಭೆವರೆಗೆ ಸಾಗಿ, ಪುರಸಭೆಯ ಮುಖ್ಯ ಅಧಿಕಾರಿ ಮಹಾನತೇಶ್ ಕೌಲಾಪುರಿ ಅವರಿಗೆ ಮನವಿ ಅರ್ಪಿಸಿದರು. ನಂತರ ಬಸವೇಶ್ವರ ವೃತ್ತಕ್ಕೆ ಆಗಮಿಸಿ ಕೆಲಕಾಲ ಪ್ರತಿಭಟನೆ ಮುಂದುವರಿಸಿದರು.
ಉಗಾರ್ ಸಕ್ಕರೆ ಕಾರ್ಖಾನೆ ಸ್ಥಾಪನೆಗೊಂಡು 84 ವರ್ಷಗಳು ಸಂದಿದ್ದು, ಕೋ-ಜನರೇಷನ್ ಘಟಕದ ಮೂಲಕ ವಿದ್ಯುತ್ ಉತ್ಪಾದನೆ, ಮಧ್ಯಸಾರ ಹಾಗೂ ಇಥೆನಾಲ್ ಉತ್ಪಾದನೆ ಮಾಡಲಾಗುತ್ತಿದೆ. ಆದರೆ, ಉಗಾರ್ನ ಪರಿಸರ ಪ್ರೇಮಿಗಳು ಇಥೆನಾಲ್ ಘಟಕದಿಂದ ಜಲ ಮತ್ತು ವಾಯು ಮಾಲಿನ್ಯ ಉಂಟಾಗುತ್ತಿದ್ದು, ಕೂಡಲೇ ಈ ಘಟಕವನ್ನು ಮುಚ್ಚಬೇಕೆಂದು ಒತ್ತಾಯಿಸುತ್ತಿದ್ದರು. ಇದರ ಆಧಾರದ ಮೇಲೆ ರಾಜ್ಯ ಪರಿಸರ ಮಾಲಿನ್ಯ ಇಲಾಖೆ ಏಕಪಕ್ಷೀಯವಾಗಿ ಈ ನಿರ್ಣಯ ಕೈಗೊಂಡಿರುವುದು ಸಂಪೂರ್ಣ ತಪ್ಪು ಎಂದು ಕಾರ್ಮಿಕ ಸಂಘಟನೆಯ ಅಧ್ಯಕ್ಷ ಕೆ.ಎಂ. ಕರಿಗಾರ್, ಉಪಾಧ್ಯಕ್ಷ ಶ್ರಾವಣ್ ಕಾಂಬಳೆ, ಕಾರ್ಯದರ್ಶಿ ಅನಿಲ್ ನಾವಿಲ್ಗರ್, ಜಂಟಿ ಕಾರ್ಯದರ್ಶಿ ಎನ್.ಎನ್. ಟೋಪಿವಾಲೆ ಹಾಗೂ ಕಾರ್ಮಿಕ ರಮೇಶ್ ಕಾಂಬಳೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಕಾರ್ಮಿಕ ರಮೇಶ್ ಕಾಂಬಳೆ ಮಾತನಾಡಿ, 84 ವರ್ಷಗಳ ಇತಿಹಾಸ ಹೊಂದಿರುವ ಹೆಸರಾಂತ ಸಕ್ಕರೆ ಕಾರ್ಖಾನೆ ಸರ್ಕಾರದ ಎಲ್ಲಾ ನಿಯಮಗಳನ್ನು ಪಾಲಿಸಿಕೊಂಡು ಬಂದಿದ್ದರೂ, ಕೆಲ ಪರಿಸರ ಪ್ರೇಮಿಗಳ ಅಟ್ಟಹಾಸದಿಂದ ಈ ತಪ್ಪು ನಿರ್ಣಯ ಕೈಗೊಳ್ಳಲಾಗಿದೆ. ಈ ಆದೇಶವನ್ನು ತಕ್ಷಣವೇ ರದ್ದುಗೊಳಿಸಿ, ಕಾರ್ಮಿಕರಿಗೆ ಮತ್ತು ರೈತರಿಗೆ ಆಗುತ್ತಿರುವ ಅನ್ಯಾಯವನ್ನು ತಪ್ಪಿಸಬೇಕು ಎಂದು ಒತ್ತಾಯಿಸಿದರು. ಕಾರ್ಮಿಕರ ಸಂಘಟನೆಯ ಕಾರ್ಯದರ್ಶಿ ಅನಿಲ್ ನಾವಿಲ್ಗರ್ ಮಾತನಾಡಿ, ಪರಿಸರ ಮಾಲಿನ್ಯ ಇಲಾಖೆ ನೀಡಿದ ಎಲ್ಲಾ ಆದೇಶಗಳನ್ನು ಸಕ್ಕರೆ ಕಾರ್ಖಾನೆ ಇದುವರೆಗೆ ಪಾಲಿಸುತ್ತಾ ಬಂದಿದೆ ನಮ್ಮ ಹೋರಾಟ ನಿರಂತರವಾಗಿ ಮುಂದುವರಿಯುತ್ತದೆ ಎಂದು ಎಚ್ಚರಿಕೆ ನೀಡಿದರು.

ಉಪಾಧ್ಯಕ್ಷ ಶ್ರಾವಣ್ ಕಾಂಬಳೆ ಮಾತನಾಡಿ, ಶಿರಗಾಂವಕರ ಬಂಧುಗಳು ಯಾವುದೇ ರಾಜಕೀಯ ಹಿನ್ನೆಲೆಯಿಲ್ಲದೆ ಉದ್ದಿಮೆಯನ್ನು ನಡೆಸುತ್ತಿದ್ದಾರೆ. ರಾಜ್ಯದಲ್ಲಿ ಒಟ್ಟು 29 ಸಕ್ಕರೆ ಕಾರ್ಖಾನೆಗಳಿದ್ದು, ಬೇರೆ ಬೇರೆ ಪಕ್ಷಗಳ ರಾಜಕೀಯ ಮುಖಂಡರ ವಶದಲ್ಲಿವೆ. ಅಲ್ಲಿಗೆ ಪರಿಸರ ಮಾಲಿನ್ಯ ಅಧಿಕಾರಿಗಳು ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಪ್ರಶ್ನಿಸಿದರು.
ಪ್ರತಿಭಟನೆಯಲ್ಲಿ ಉಗಾರ್ ಸಕ್ಕರೆ ಕಾರ್ಖಾನೆಯ ಕಾರ್ಮಿಕರ ಸಂಘಟನೆಯ ಸದಸ್ಯರಾದ ಎಸ್.ಎನ್. ಪೂಜಾರಿ, ಎ.ಎ. ಕಾಮತ್, ಎಂ.ಜಿ. ಉಳ್ಳಾಗಡ್ಡಿ, ಎ.ಬಿ. ವಾಲಿ, ಟಿ.ವಿ. ಜೋಶಿ ಅವರ ನೇತೃತ್ವದಲ್ಲಿ ಸಾವಿರಾರು ಕಾರ್ಮಿಕರು ಭಾಗವಹಿಸಿದ್ದರು. ಜನಶಕ್ತಿ ಸೇವಾ ಸಂಘದ ವತಿಯಿಂದ ನ್ಯಾಯವಾದಿ ರಾಹುಲ್ ಕಟಗೇರಿ ಅವರು ಕಾಗವಾಡ ತಹಸೀಲ್ದಾರ್ ಕಚೇರಿಯ ಹಿರಿಯ ಅಧಿಕಾರಿ ಎಂ.ಎಸ್. ಪಾಟೀಲ್ ಹಾಗೂ ಉಪತಹಸೀಲ್ದಾರ್ ಅನ್ನಾಸಾಹೇಬ್ ಕೋರೆ ಅವರಿಗೆ ಮನವಿ ಅರ್ಪಿಸಲಾಯಿತು. ಉಗಾರ್ ಪುರಸಭೆಯ ಅಧ್ಯಕ್ಷರು ಮತ್ತು ಸದಸ್ಯರು ಕಾರ್ಮಿಕರಿಗೆ ಬೆಂಬಲ ಸೂಚಿಸಿದರು.ಕಾಗವಾಡ ಪಿಎಸ್ಐ ರಾಘವೇಂದ್ರ ಖೋತ ತಮ್ಮ ಸಿಬ್ಬಂದಿಯೊಂದಿಗೆ ಸ್ಥಳದಲ್ಲಿ ಬಿಗಿ ಬಂದೋಬಸ್ತ್ ಕೈಗೊಂಡಿದ್ದರು.
