ಬೆಳಗಾವಿಯ ಕಣಬರ್ಗಿ ಗ್ರಾಮದ ರೈತರ ಫಲವತ್ತಾದ ಜಮೀನುಗಳನ್ನು ಅಕ್ರಮವಾಗಿ ಒತ್ತುವರಿ ಮಾಡಲು ಯತ್ನಿಸುತ್ತಿರುವ ಬುಡಾ (BUDA) ಅಧಿಕಾರಿಗಳು ಮತ್ತು ಶಾಸಕರ ವಿರುದ್ಧ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. 50:50 ಪ್ಲಾಟ್ ಹಂಚಿಕೆ ಹೆಸರಿನಲ್ಲಿ ತಮಗೆ ವಂಚಿಸುತ್ತಿದ್ದು, ನ್ಯಾಯ ಸಿಗದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಬೆಳಗಾವಿಯ ಕಣಬರ್ಗಿ ಗ್ರಾಮದಲ್ಲಿ ರೈತರಿಗೆ ಸೇರಿದ ಅಂದಾಜು 60 ಎಕರೆಗೂ ಅಧಿಕ ಫಲವತ್ತಾದ ಜಮೀನನ್ನು ಬಲವಂತವಾಗಿ ಕಬಳಿಸಲು ಯತ್ನಿಸಲಾಗುತ್ತಿದೆ ಎಂದು ಶ್ರೀ ಸಿದ್ದೇಶ್ವರ ರೈತ ಸಂಘಟನೆ ಹಾಗೂ ಸ್ಥಳೀಯ ರೈತರು ಗಂಭೀರ ಆರೋಪ ಮಾಡಿದ್ದಾರೆ. ಬುಡಾ (BUDA) ಚೇರ್ಮನ್ ಆಸೀಫ್ ಸೇಠ್ ಕಮಿಷನರ್ ಶಕೀಲ್ ಅಹಮದ್ ಹಾಗೂ ಸ್ಥಳೀಯ ತಹಶೀಲ್ದಾರ್ ಮತ್ತು ಕಂದಾಯ ಅಧಿಕಾರಿಗಳು ಶಾಮೀಲಾಗಿ, ಸಾತಬಾರ್ ಉತ್ತರದಲ್ಲಿ ರೈತರ ಹೆಸರುಗಳನ್ನು ಅಕ್ರಮವಾಗಿ ಕಡಿಮೆ ಮಾಡುತ್ತಿದ್ದಾರೆ ಎಂದು ಆಕ್ಷೇಪಿಸಲಾಗಿದೆ. ಯಾವುದೇ ಒಪ್ಪಿಗೆ ಅಥವಾ ಸಹಿ ಪಡೆಯದೆ ಜಮೀನನ್ನು ಸ್ವಾಧೀನಪಡಿಸಿಕೊಳ್ಳುವ 50:50 ಹಂಚಿಕೆ ಸ್ಕೀಮ್ ಅನ್ನು ತಕ್ಷಣ ನಿಲ್ಲಿಸಬೇಕೆಂದು ರೈತರು ಆಗ್ರಹಿಸಿದ್ದಾರೆ.
ಸಂಕಷ್ಟಕ್ಕೆ ಸಿಲುಕಿರುವ ಕೃಷಿಕರು ತಮ್ಮ ಅಸ್ತಿತ್ವ ಹಾಗೂ ಬದುಕನ್ನು ಉಳಿಸಿಕೊಳ್ಳಲು ಹೋರಾಟದ ಹಾದಿ ಹಿಡಿದಿದ್ದಾರೆ. ದಾಖಲೆಗಳಲ್ಲಿ ತಮ್ಮ ಹೆಸರನ್ನು ತಿರುಚಿರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು 7 ದಿನಗಳ ಒಳಗಾಗಿ ಸರಿಯಾದ ಸಾತಬಾರ್ ಉತ್ತರವನ್ನು ಮರುನೋಂದಣಿ ಮಾಡಿ ನೀಡಬೇಕು ಎಂದು ಮನವಿ ಸಲ್ಲಿಸಲಾಗಿದೆ. ಒಂದು ವೇಳೆ ಜಮೀನು ಒತ್ತುವರಿ ಕಿರುಕುಳ ಮುಂದುವರಿದರೆ ರೈತ ಸಂಘಟನೆಗಳ ನೇತೃತ್ವದಲ್ಲಿ ಬೆಳಗಾವಿ ಭೂದಾಖಲೆಗಳ ಹಾಗೂ ಬುಡಾ ಕಚೇರಿ ಮುಂದೆ ಆತ್ಮಾಹುತಿಗೂ ಹಿಂದೆ ಸರಿಯುವುದಿಲ್ಲ ಎಂದು ರೈತರು ಎಚ್ಚರಿಕೆ ನೀಡಿದ್ದಾರೆ.
