ಖಾನಾಪೂರ ಅರಣ್ಯ ಉಪವಿಭಾಗದಲ್ಲಿ ಕಳೆದ ಒಂದು ವಾರದಿಂದ ಸಂಚರಿಸುತ್ತಿರುವ ಆನೆಗಳ ಹಿಂಡಿನಿಂದ ರೈತರು ಆತಂಕಕ್ಕೊಳಗಾಗಿದ್ದಾರೆ. ಭೀಮಗಡ ವನ್ಯಜೀವಿ ವಲಯದ ಪಾಲಿ ಗ್ರಾಮದ ಭತ್ತದ ಗದ್ದೆಗಳಲ್ಲಿ ಬುಧವಾರ ರಾತ್ರಿ ಏಳು ಆನೆಗಳು ಕಾಣಿಸಿಕೊಂಡಿವೆ.

ಒಟ್ಟು ಸುಮಾರು 9 ಆನೆಗಳಿರುವ ಹಿಂಡಿನಲ್ಲಿ ಒಂಟಿ ಸಲಗದ ಜೊತೆಗೆ ಮರಿಗಳು ಇರುವುದರಿಂದ ಅರಣ್ಯ ಇಲಾಖೆ ಮುನ್ನೆಚ್ಚರಿಕೆ ವಹಿಸಿದೆ. ಎಸಿಎಫ್ ಬಸವರಾಜ ವಾಳದ ಹಾಗೂ ಆರ್‌ಎಫ್‌ಒ ಸಯ್ಯದಸಾಬ್ ನದಾಫ್ ನೇತೃತ್ವದಲ್ಲಿ ಅರಣ್ಯ ಸಿಬ್ಬಂದಿ ಇಡೀ ರಾತ್ರಿ ಕೂಂಬಿಂಗ್ ನಡೆಸಿದರು. ಪಾಲಿ, ಹೆಮ್ಮಡಗಾ, ಅಬನಾಳಿ, ಡೊಂಗರಗಾವ ಹಾಗೂ ಶಿರೋಳಿವಾಡಾ ಪ್ರದೇಶಗಳಲ್ಲಿ ಆನೆಗಳ ಚಲನವಲನ ಕಂಡುಬಂದಿದ್ದು, ಡ್ರೋನ್‌ಗಳ ಮೂಲಕವೂ ನಿಗಾ ಇರಿಸಲಾಗಿದೆ. ಆನೆಗಳು ಭತ್ತದ ಗದ್ದೆಗಳಲ್ಲಿ ಸಂಚರಿಸುತ್ತಿರುವುದರಿಂದ ಬೆಳೆ ಹಾನಿಯ ಮಾಹಿತಿಯನ್ನು ಅರಣ್ಯ ಇಲಾಖೆ ಸಂಗ್ರಹಿಸುತ್ತಿದೆ. ಹಳಿಯಾಳ, ಕ್ಯಾಸಲ್‌ರಾಕ್, ಜಗಳಪೇಟೆ, ತಿನೈಘಾಟ್ ಹಾಗೂ ಗಣೇಶಗುಡಿ ಭಾಗದಿಂದ ಆಹಾರ ಅರಸಿ ಆನೆಗಳು ಬಂದಿರುವ ಸಾಧ್ಯತೆ ಇದೆ ಎಂದು ಇಲಾಖೆ ತಿಳಿಸಿದೆ. ಆನೆಗಳ ಬಳಿ ಸಾರ್ವಜನಿಕರು ತೆರಳಬಾರದು, ಕೂಗಾಟ ಅಥವಾ ಪಟಾಕಿ ಸಿಡಿಸುವ ಮೂಲಕ ಅವುಗಳನ್ನು ಕೆರಳಿಸಬಾರದು ಎಂದು ಅರಣ್ಯ ಇಲಾಖೆ ಮನವಿ ಮಾಡಿದೆ. ಆನೆಗಳ ಹಿಂಡನ್ನು ಸುರಕ್ಷಿತವಾಗಿ ಕಾಡಿಗೆ ಮರಳಿಸಲು ನಿರಂತರ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಡಿಸಿಎಫ್ ಎನ್.ಇ. ಕ್ರಾಂತಿ ತಿಳಿಸಿದ್ದಾರೆ.
