Dharwad

ಧಾರವಾಡದ ಒಂದೇ ಗ್ರಾಮದ ಇಬ್ಬರು ಪ್ರತ್ಯೇಕ ಸ್ಥಳಗಳಲ್ಲಿ ಆತ್ಮಹತ್ಯೆ: ಪ್ರೀತಿಯ ಸಂಬಂಧವೇ ಸಾವಿಗೆ ಕಾರಣವಾಯಿತೇ?

Share

ಅವರಿಬ್ಬರ ನಡುವೆ ಅಂದಾಜು ಒಂದೇ ವರ್ಷದ ಅಂತರ. ಇಬ್ಬರೂ ಇನ್ನೂ ಬಾಳಿ ಬದುಕಬೇಕಾದ ವಯಸ್ಸಿನವರು. ಮೇಲಾಗಿ ಒಂದೇ ಗ್ರಾಮದವರು. ಆದರೆ, ಈಗ ಈ ಇಬ್ಬರ ಆತ್ಮಹತ್ಯೆಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಈ ಇಬ್ಬರ ಆತ್ಮಹತ್ಯೆಯ ಹಿಂದೆ ಪ್ರೀತಿಯ ವಿಷಯವಿತ್ತು ಎಂದು ಯುವಕನ ಸ್ನೇಹಿತನ ಆ ಒಂದು ಹೇಳಿಕೆ ತಿಳಿಸುತ್ತಿದೆ. ಎಲ್ಲಿದೆ, ಏನಿದು ಕಥೆ ಅಂತೀರಾ? ಇಲ್ಲಿದೆ ನೋಡಿ ಅದರ ಕಂಪ್ಲೀಟ್ ಲವ್ ಕಹಾನಿ…

ಈ ಫೋಟೋದಲ್ಲಿರುವ ಯುವತಿಯು ಧಾರವಾಡ ತಾಲೂಕಿನ ಕೊಟಬಾಗಿ ಗ್ರಾಮದ ನಿವಾಸಿ, 20 ವರ್ಷದ ಮೇಘಾ ಕಬ್ಬನ್ನವರ. ಈಕೆ ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆರಂಭದಲ್ಲಿ, ತಾಯಿ ಮಗಳಿಗೆ “ರೀಲ್ಸ್ ನೋಡಬೇಡ” ಎಂದು ಬುದ್ಧಿ ಹೇಳಿದ್ದಕ್ಕೆ ಮಗಳು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂಬ ಸುದ್ದಿ ಹಬ್ಬಿತ್ತು. ಇದೇ ನಿಜವಿರಬಹುದು ಎಂದು ಮಾಧ್ಯಮಗಳನ್ನೂ ಇಲ್ಲಿ ನಂಬಿಸಲಾಗಿತ್ತು. ಮಾಧ್ಯಮದವರು ಇದರ ಸತ್ಯ ಕೆದಕಲು ಮುಂದಾದಾಗ, ಸತ್ಯವನ್ನು ಯುವತಿಯ ಕುಟುಂಬಸ್ಥರು ಮರೆಮಾಚುವ ಪ್ರಯತ್ನ ಮಾಡಿದ್ದರು. ಆದರೆ, ಈ ಯುವತಿಯ ಆತ್ಮಹತ್ಯೆಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ.

ಹೌದು, ಮೇಘಾ ಆತ್ಮಹತ್ಯೆಯ ಹಿಂದೆ ಪ್ರೇಮಕಥೆ ಈಗ ತೆರೆದುಕೊಂಡಿದೆ. ಒಂದೇ ಗ್ರಾಮದ ಯುವಕ-ಯುವತಿ ಪ್ರತ್ಯೇಕ ಸ್ಥಳಗಳಲ್ಲಿ ಆತ್ಮಹತ್ಯೆಗೆ ಶರಣಾಗಿದ್ದು, ಎಂಥವರಿಗೂ ಅನುಮಾನ ಮೂಡಿಸುವಂತಿತ್ತು. ಧಾರವಾಡದ ಕೊಟಬಾಗಿ ಗ್ರಾಮದ ಮೂಲದ ಯುವತಿ ಮೇಘಾ ಕಬ್ಬನ್ನವರ ಹಾಗೂ ತರುಣ ಸಾಗರ ಒಂದೇ ಗ್ರಾಮದವರಾಗಿದ್ದು, ಮೇಘಾ ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇದೇ ವಿಷಯ ತಿಳಿದು ಯುವಕ, ಧಾರವಾಡದಲ್ಲಿರುವ ತನ್ನ ಗೆಳೆಯನ ಪಿಜಿಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ನೇಣಿಗೆ ಶರಣಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಈ ಇಬ್ಬರ ಆತ್ಮಹತ್ಯೆಯ ಹಿಂದೆ ಪ್ರೇಮಕಥೆ ತೆರೆದುಕೊಂಡಿದೆ. ಯುವತಿಯ ಕುಟುಂಬಸ್ಥರಿಗೆ ಮೇಘಾ ಹಾಗೂ ತರುಣನ ಪ್ರೀತಿಯ ವಿಷಯ ತಿಳಿದಿದ್ದು, ಇದೇ ವಿಚಾರಕ್ಕೆ ಯುವತಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಕೇಳಿಬಂದಿದೆ. ಈ ವಿಷಯ ಯುವಕನ ಕಿವಿಗೂ ಬಿದ್ದಿದೆ. ಊರಿನ ಮನೆಗೆ ಹೋಗಬೇಕಿದ್ದ ಯುವಕ ತರುಣ, ಧಾರವಾಡದ ಸ್ನೇಹಿತನ ಪಿಜಿಯಲ್ಲಿ ಉಳಿದುಕೊಂಡಿದ್ದಾನೆ. ಪಿಜಿಯಲ್ಲಿದ್ದ ಸ್ನೇಹಿತರು ಕಾಲೇಜಿಗೆ ತೆರಳುತ್ತಿದ್ದಂತೆ, ತರುಣ ತನ್ನ ಪ್ರೇಯಸಿಯನ್ನು ಕಳೆದುಕೊಂಡ ಹಿನ್ನೆಲೆಯಲ್ಲಿ ತಾನೂ ನೇಣಿಗೆ ಶರಣಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಮಗಳನ್ನು ಕಳೆದುಕೊಂಡ ಕರಳು ಒಂದು ಕಡೆ ಕಣ್ಣೀರು ಹಾಕುತ್ತಿದ್ದರೆ, ಎದೆ ಎತ್ತರಕ್ಕೆ ಬೆಳೆದ ಮಗನನ್ನು ಕಳೆದುಕೊಂಡ ಯುವಕನ ತಾಯಿ ಮತ್ತೊಂದು ಕಡೆ ಕಣ್ಣೀರು ಹಾಕುತ್ತಿರುವ ದೃಶ್ಯ ಎಂಥವರ ಕರಳು ಹಿಂಡುವಂತಿತ್ತು.

ಇನ್ನೂ ಯುವಕ ತರುಣ ಹಾಗೂ ಮೇಘಾ—ಈ ಇಬ್ಬರ ಪ್ರೀತಿಯ ವಿಷಯ ಗ್ರಾಮದಲ್ಲಾಗಲಿ ಅಥವಾ ಕುಟುಂಬಸ್ಥರಲ್ಲಿ ಯಾರೊಬ್ಬರಿಗೂ ಅನುಮಾನ ಬಂದಿರಲಿಲ್ಲವಂತೆ. ಇತ್ತೀಚೆಗಷ್ಟೇ ಈ ಪ್ರೀತಿಯ ವಿಷಯ ಯುವತಿಯ ಮನೆಯವರ ಕಿವಿಗೆ ಬಿದ್ದು, ಯುವತಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಇದೇ ವಿಚಾರ ತಿಳಿದು, ಧಾರವಾಡದ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಯುವಕ ತರುಣ ತನ್ನ ಆತ್ಮೀಯನಿಗೆ ವಿಷಯ ತಿಳಿಸಿದ್ದಾನೆ.

ತರುಣನ ಆತ್ಮೀಯನಿಗೆ ಬಿಟ್ಟರೆ ಈ ಪ್ರೀತಿಯ ವಿಚಾರ ಯುವಕನ ಕುಟುಂಬಸ್ಥರಿಗೆ ತಿಳಿದಿರಲಿಲ್ಲ. ಯುವತಿಯ ಮನೆಯಲ್ಲಿ ವಿಷಯ ತಿಳಿದು ಗಲಾಟೆಯಾಗಿರುವುದು ಹೇಗೋ ಯುವಕನಿಗೆ ತಿಳಿದಿದೆ. ಇದೇ ವಿಚಾರಕ್ಕೆ ಯುವಕ ತರುಣ ಧಾರವಾಡದಲ್ಲಿಯೇ ಉಳಿದುಕೊಂಡಿದ್ದಾನೆ. ಮನೆಯವರೊಂದಿಗೆ ರಾತ್ರಿ ಹಾಗೂ ಮುಂಜಾನೆ ಮಾತನಾಡಿದ್ದಾನೆ. ನಂತರ ಮನೆಯವರು ಕರೆ ಮಾಡಿದರೂ ಫೋನ್ ತೆಗೆದಿಲ್ಲ. ಆದರೆ ಅಷ್ಟರೊಳಗಾಗಿಯೇ ಯುವಕ ಬಾರದ ಲೋಕಕ್ಕೆ ಹೊರಟುಹೋಗಿದ್ದ.

ಮಗ ಫೋನ್ ಎತ್ತದ ಹಿನ್ನೆಲೆಯಲ್ಲಿ ಗಾಬರಿಗೊಂಡ ಯುವಕನ ತಂದೆ-ತಾಯಿ ಅಂಗಡಿಗೆ ಬಂದು ವಿಚಾರಿಸಿದ್ದಾರೆ. ಆತ್ಮೀಯನಿಂದ ಮಗ ಎಲ್ಲಿದ್ದಾನೆ ಎಂದು ತಿಳಿದುಕೊಂಡು ಬಂದು ನೋಡಿದಾಗ, ತರುಣ ಆತ್ಮಹತ್ಯೆಗೆ ಶರಣಾಗಿರುವುದು ಬೆಳಕಿಗೆ ಬಂದಿದೆ.

ಈ ಇಬ್ಬರ ದುಡುಕಿನ ನಿರ್ಧಾರದಿಂದಾಗಿ, ಬಾಳಿ ಬದುಕಬೇಕಾಗಿದ್ದ ಎರಡು ಜೀವಗಳು ತಮ್ಮ ಪ್ರಾಣ ಕಳೆದುಕೊಂಡಿದ್ದು, ಈಗ ಎರಡೂ ಕುಟುಂಬಗಳಲ್ಲಿ ಹಾಗೂ ಗ್ರಾಮದಲ್ಲಿ ಸೂತಕದ ವಾತಾವರಣ ಸೃಷ್ಟಿಯಾಗಿದೆ. ಈ ಎರಡು ಜೀವಗಳ ಸಾವಿನ ನಿಖರ ಕಾರಣ ಪೊಲೀಸ್ ಇಲಾಖೆಯ ತನಿಖೆಯಿಂದಷ್ಟೇ ಹೊರಬರಬೇಕಾಗಿದೆ. ಗರಗ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಯುವತಿ ಆತ್ಮಹತ್ಯೆಗೆ ಶರಣಾಗಿದ್ದರೆ, ಧಾರವಾಡ ವಿದ್ಯಾಗಿರಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಯುವಕ ಕೊನೆಯುಸಿರೆಳೆದಿರುವುದು ದುರಂತವೇ ಸರಿ.

Tags:

error: Content is protected !!