hubbali

ಮಲಪ್ರಭಾ ಸಕ್ಕರೆ ಕಾರ್ಖಾನೆ ಅವ್ಯವಹಾರ: ವರದಿ ನೀಡಿದರೂ ಕ್ರಮ ಇಲ್ಲ; ರೈತ ಸಂಘದಿಂದ ಹೋರಾಟದ ಎಚ್ಚರಿಕೆ!

Share

ಮಲಪ್ರಭಾ ಸಕ್ಕರೆ ಕಾರ್ಖಾನೆಯಲ್ಲಿ ಕೋಟಿ ಅವ್ಯವಹಾರ
ಸರ್ಕಾರಕ್ಕೆ ಸಲ್ಲಿಕೆಯಾಯ್ತು ತನಿಖಾಧಿಕಾರಿಗಳ ಅಂತಿಮ ವರದಿ
ತನಿಖಾ ವರದಿಯಿದ್ದರೂ ಆಡಳಿತ ಮಂಡಳಿ ಮೌನ
ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ರೈತರ ಎಚ್ಚರಿಕೆ

ಬೆಳಗಾವಿ ಜಿಲ್ಲೆಯ ಎಂ.ಕೆ. ಹುಬ್ಬಳ್ಳಿಯ ಮಲಪ್ರಭಾ ಸಕ್ಕರೆ ಕಾರ್ಖಾನೆಯಲ್ಲಿ ನಡೆದಿದೆ ಎನ್ನಲಾದ ಕೋಟ್ಯಂತರ ರೂಪಾಯಿ ಅವ್ಯವಹಾರದ ವಿರುದ್ಧ ರೈತ ಸಂಘಟನೆಗಳು ಮತ್ತೆ ಬೀದಿಗಿಳಿದಿವೆ. ತನಿಖಾ ವರದಿ ಸಲ್ಲಿಕೆಯಾಗಿದ್ದರೂ ಆಡಳಿತ ಮಂಡಳಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳದಿರುವುದನ್ನು ಖಂಡಿಸಿ, ಹೋರಾಟವನ್ನು ತೀವ್ರಗೊಳಿಸುವ ಎಚ್ಚರಿಕೆ ನೀಡಿವೆ.

ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಎಂ.ಕೆ. ಹುಬ್ಬಳ್ಳಿಯಲ್ಲಿರುವ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ದೊಡ್ಡ ಮಟ್ಟದ ಹಣ ದುರುಪಯೋಗವಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘಗಳ ಮಹಾಸಂಘ ಒಕ್ಕೂಟ ಆರೋಪಿಸಿದೆ. ರಾಜ್ಯಾಧ್ಯಕ್ಷ ಭೀರಪ್ಪ ದೇಮಪ್ಪ ದೇಶನೂರ ನೀಡಿದ ದೂರಿನನ್ವಯ ಸರ್ಕಾರವು ನಿವೃತ್ತ ಅಪರ ನಿಬಂಧಕ ಎಸ್.ಎಂ. ಕಲೂತಿ ಹಾಗೂ ನಿವೃತ್ತ ಜಿಲ್ಲಾ ನ್ಯಾಯಾಧೀಶ ಎಸ್.ಸಿ. ಇಂಗಳಗಿ ಅವರನ್ನು ವಿಚಾರಣಾಧಿಕಾರಿಗಳಾಗಿ ನೇಮಿಸಿತ್ತು. ತಿಂಗಳ ಕಾಲ ನಡೆಸಿದ ತನಿಖೆಯ ವರದಿಯನ್ನು ಅಧಿಕೃತವಾಗಿ ಸರ್ಕಾರಕ್ಕೆ ಸಲ್ಲಿಸಲಾಗಿದೆ.

ಸಲ್ಲಿಕೆಯಾಗಿರುವ ತನಿಖಾ ವರದಿಯಲ್ಲಿ ಕಾರ್ಖಾನೆಯ ಅಧ್ಯಕ್ಷರು, ವ್ಯವಸ್ಥಾಪಕ ನಿರ್ದೇಶಕರು, ಆಡಳಿತ ಮಂಡಳಿಯ ನಿರ್ದೇಶಕರು ಹಾಗೂ ಸಿಬ್ಬಂದಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಆದಾಗ್ಯೂ, ಪ್ರಸ್ತುತ ಆಡಳಿತ ಮಂಡಳಿಯು ಯಾವುದೇ ಕ್ರಮ ಕೈಗೊಳ್ಳದಿರುವುದನ್ನು ವಿರೋಧಿಸಿ ರೈತ ಒಕ್ಕೂಟವು ಅಧಿಕಾರಿಗಳಿಗೆ ಮನವಿ ಸಲ್ಲಿಸಿದೆ. ತಪ್ಪಿತಸ್ಥರ ವಿರುದ್ಧ ತಕ್ಷಣವೇ ಕಾನೂನು ಕ್ರಮ ಜರುಗಿಸದಿದ್ದರೆ ಮುಂಬರುವ ದಿನಗಳಲ್ಲಿ ಬೃಹತ್ ಮಟ್ಟದ ಹೋರಾಟ ರೂಪಿಸುವುದಾಗಿ ಮುಖಂಡರು ಎಚ್ಚರಿಸಿದ್ದಾರೆ.

Tags:

error: Content is protected !!