ಮಂತ್ರಾಲಯದಿಂದ ಪಾದಯಾತ್ರೆ ಮಾಡಿದ ಭಕ್ತರಿಗೆ ಸನ್ಮಾನ

ಅನೇಕ ಗಣ್ಯರು ಹಾಗೂ ಸದ್ಭಕ್ತರು ಭಾಗಿ
ಕಲಿಯುಗದ ಕಲ್ಪವೃಕ್ಷ, ಭಕ್ತರ ಪಾಲಿನ ಕರುಣಾಮಯ ಗುರು ಶ್ರೀ ರಾಘವೇಂದ್ರ ರಾಯರು ತಮ್ಮ ಭಕ್ತಿ, ಜ್ಞಾನ, ಧರ್ಮ ಹಾಗೂ ಸನ್ಮಾರ್ಗದ ಬೋಧನೆಗಳ ಮೂಲಕ ಕೋಟ್ಯಂತರ ಭಕ್ತರ ಆರಾಧ್ಯರಾಗಿದ್ದಾರೆ.
ಭಕ್ತರು ಪ್ರೀತಿಯಿಂದ “ಗುರು ರಾಯರು” ಎಂದು ಕರೆಯುವ ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವವು ಉಗಾರನಲ್ಲಿ ಶ್ರದ್ಧಾ-ಭಕ್ತಿಯಿಂದ ಆಚರಿಸಲ್ಪಟ್ಟಿತು.
ಗ್ರಾಮದ ಶಿವಪ್ರಸನ್ನ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ದಿನಾಂಕ 29 ರಿಂದ 31ರ ವರೆಗೆ ನಡೆದ ಶ್ರೀ ರಾಘವೇಂದ್ರ ಸ್ವಾಮಿಗಳ 355ನೇ ಆರಾಧನಾ ಮಹೋತ್ಸವವು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಶ್ರದ್ಧಾ-ಭಕ್ತಿಯಿಂದ ಸಂಪನ್ನಗೊಂಡಿತು.
ಮೂರು ದಿನಗಳ ಕಾಲ ನಡೆದ ಆರಾಧನಾ ಮಹೋತ್ಸವದ ಅಂಗವಾಗಿ ಶ್ರೀ ರಾಘವೇಂದ್ರ ಸ್ವಾಮಿಗಳಿಗೆ ವಿಶೇಷ ಪೂಜೆ, ಅಭಿಷೇಕ, ಪಾರಾಯಣ, ಭಜನೆ, ಮಹಾಮಂಗಳಾರತಿ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು. ಮಠದ ಆವರಣದಲ್ಲಿ ಮೂರು ದಿನಗಳ ಕಾಲ ಭಕ್ತಿಮಯ ವಾತಾವರಣ ನಿರ್ಮಾಣವಾಗಿತ್ತು.
ಆರಾಧನಾ ಮಹೋತ್ಸವದ ಅಂತಿಮ ದಿನವಾದ ಸೋಮವಾರದಂದು ಉತ್ತರಾರಾಧನೆಯ ಅಂಗವಾಗಿ ವಿಶೇಷ ಪೂಜೆ, ಪಂಚಾಮೃತ ಅಭಿಷೇಕ, ಅಷ್ಟೋತ್ತರ, ರಥಾಂಗಹೋಮ ಹಾಗೂ ಸದ್ಭಕ್ತರಿಂದ ಕೈಯಿಂದ ರಥ ಎಳೆದು ರಥೋತ್ಸವ ಕಾರ್ಯಕ್ರಮಗಳು ನೆರವೇರಿದವು. ಭಕ್ತರು ದೇವರ ಆರಾಧನೆ ಮಾಡುತ್ತಾ ಭಕ್ತಿ ಸಮರ್ಪಣೆ ಮಾಡಿದರು.
ಸನ್ 1977ರಲ್ಲಿ ಉಗಾರದ ರಾಘವೇಂದ್ರ ಸ್ವಾಮಿಗಳ ಸದ್ಭಕ್ತರು ಮಂತ್ರಾಲಯದಿಂದ ಸುಮಾರು 350 ಕಿಲೋಮೀಟರ್ ಅಂತರವನ್ನು ಬರಿಗಾಲಿನಿಂದ ಪಾದಯಾತ್ರೆ ಮುಖಾಂತರ ಮೂರ್ತಿಕಾವನ್ನು ತೆಗೆದುಕೊಂಡು ಬಂದು ಉಗಾರದ ರಾಘವೇಂದ್ರ ಮಠದ ಸ್ಥಳದಲ್ಲಿ ಸ್ಥಾಪನೆ ಮಾಡಿದರು. 50 ವರ್ಷಗಳಿಂದ ನಿರಂತರವಾಗಿ ಈ ಮಠದಲ್ಲಿ ಸೇವಾ ಕಾರ್ಯ ಪ್ರಾರಂಭವಾಗಿದೆ. ಅಂತಹ ಭಕ್ತರಿಗೆ ರಾಘವೇಂದ್ರ ಉತ್ಸವ ಸೇವಾ ಸಮಿತಿ ವತಿಯಿಂದ ಸನ್ಮಾನ ಪತ್ರ ನೀಡಿ ಗೌರವಿಸಲಾಯಿತು.
ಉಗಾರ ರಾಘವೇಂದ್ರ ಮಠದ ಅಧ್ಯಕ್ಷ ಶ್ರೀಪಾದ ಜೋಶಿ, ರಾಘವೇಂದ್ರ ಸ್ವಾಮಿಗಳ ಮೂರು ದಿನದ ಸಮಾರಂಭದ ಬಗ್ಗೆ ವಿಶೇಷ ಮಾಹಿತಿ ನೀಡಿದರು.
ಮಹಿಳಾ ಸದ್ಭಕ್ತರಾದ ಶ್ರೀಮತಿ ಸುಪ್ರಿಯಾ ದೇಶಮುಖ ಇವರು ಸಮಾರಂಭದ ಬಗ್ಗೆ ಮಾಹಿತಿ ನೀಡಿದರು.
ಉಗಾರ ಸೇವಾ ಸಮಿತಿ ಉಪಾಧ್ಯಕ್ಷ ವಿನಯ ಗಲಗಲೆ, ಕಾರ್ಯದರ್ಶಿ ಗಿರೀಶ ಕುಲಕರ್ಣಿ, ಗಿರೀಶ ಸಂಜೀವ, ಸಂತೋಷ ಕುಲಕರ್ಣಿ, ವಿಠ್ಠಲ ದೇಸಾಯಿ, ಅಪ್ಪಾಸಾಹೇಬ ಇನಾಮದಾರ, ಪ್ರದೀಪ ಆನಿಖಿಂಡೆ, ಸಂತೋಷ ಕುಲಕರ್ಣಿ, ಬ್ರಾಹ್ಮಣ ಸಮಾಜ ಅಧ್ಯಕ್ಷ ಪ್ರಾಣೇಶ ಕುಲಕರ್ಣಿ, ಮಹಿಳಾ ಸದ್ಭಕ್ತರಾದ ರಚನಾ ದೇಶಪಾಂಡೆ, ಗೌರಿ ಕುಲಕರ್ಣಿ, ಅನನ್ಯ ಕುಲಕರ್ಣಿ, ಕಲ್ಪನಾ ಕೊಪ್ಪಳ, ಶ್ರೀನಿವಾಸ ಕೊಪ್ಪಳ, ರಾಜೇಂದ್ರ ಕಟ್ಟಿ, ಹರೀಶ ಜಾಹಗಿರದಾರ, ಗೋಪಿ ದೇಶಪಾಂಡೆ, ಸುಪ್ರಿಯಾ ದೇಶಮುಖ, ಕುಡಚಿ ಪಟ್ಟಣದ ವೈದ್ಯರಾದ ಡಾ. ಎನ್.ಎಚ್. ಸಾಬಡೆ, ಡಾ. ವಿದ್ಯಾಧರ ದೇಶಪಾಂಡೆ, ಡಾ. ಪ್ರಮೋದ ಮುತಾಲಿಕ, ರಾಘವೇಂದ್ರ ಪಾಟೀಲ ಸೇರಿದಂತೆ ಅನೇಕ ಸದ್ಭಕ್ತರು ಕಾರ್ಯಕ್ರಮ ಯಶಸ್ವಿಗೊಳಿಸಲು ಪ್ರಯತ್ನಿಸಿದರು.
