Belagavi

ಅತಿಯಾದ ಮೊಬೈಲ್ ಮತ್ತು ಎಐ ಬಳಕೆ ಯುವ ಜನತೆಯ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಮಾರಕ: ಡಿಸಿಪಿ ನಿರಂಜನ್ ರಾಜ್ ಅರಸ್ ಎಚ್ಚರಿಕೆ

Share

ಮೊಬೈಲ್ ಬಳಕೆ ಮತ್ತು ಕೃತಕ ಬುದ್ಧಿಮತ್ತೆಯ (AI) ಹೆಚ್ಚಳದಿಂದ ಇಂದಿನ ಯುವ ಜನತೆಯ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಯ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದು ಡಿಸಿಪಿ ನಿರಂಜನ್ ರಾಜ್ ಅರಸ್ ಅವರು ಕಳವಳ ವ್ಯಕ್ತಪಡಿಸಿದರು.

ಬೆಳಗಾವಿಯ ಶಿವಬಸವ ನಗರದ ಶ್ರೀ ಶಿವಬಾಸವೇಶ್ವರ ಇಂಗ್ಲಿಷ್ ಮೀಡಿಯಂ ಸ್ಕೂಲ್‌ನಲ್ಲಿ 2026-27ನೇ ಸಾಲಿನ ವಿದ್ಯಾರ್ಥಿ ಪರಿಷತ್ತಿನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ನಾಗನೂರು ರುದ್ರಾಕ್ಷಿಮಠದ ಪರಮಪೂಜ್ಯ ಡಾ. ಅಲ್ಲಮಪ್ರಭು ಮಹಾಸ್ವಾಮೀಜಿಗಳ ದಿವ್ಯ ಸಾನಿಧ್ಯದಲ್ಲಿ ಹಾಗೂ ಸಿದ್ಧರಾಮೇಶ್ವರ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಎಸ್.ಪಿ. ಹಿರೇಮಠ ಅವರ ಅಧ್ಯಕ್ಷತೆಯಲ್ಲಿ ಅತ್ಯಂತ ವಿಜೃಂಭಣೆಯಿಂದ ಜರುಗಿತು. ಗಣ್ಯರಿಂದ ದೀಪ ಬೆಳಗುವ ಮೂಲಕ ಉದ್ಘಾಟನೆಗಂಡ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಿಂದ ವಿದ್ಯಾರ್ಥಿಗಳಿಗೆ ಬಿಲ್ಲೆಗಳನ್ನು ಧರಿಸಲಾಯಿತು,. ಕ್ರೀಡಾ ಸಚಿವ ವೇದಾಂತ್ ಗೌಂಡಿ ಅವರು ನಾಲ್ಕು ಹೌಸ್‌ಗಳ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು ಹಾಗೂ ತನುಶ್ರೀ ಯರ್ಜನ್ನವರ್ ಮತ್ತು ಸುಜಲ್ ನಾಯರ್ ಪ್ರಧಾನ ಮಂತ್ರಿಯವರ ಭಾಷಣ ಮಾಡಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಬೆಳಗಾವಿ ನಗರದ ಉಪ ಪೊಲೀಸ್ ಆಯುಕ್ತರಾದ (ಕಾ ಮತ್ತು ಸು) ಎನ್. ನಿರಂಜನರಾಜೇ ಅರಸ್ ಅವರು ಮಾತನಾಡಿ, ಮೊಬೈಲ್ ಬಳಕೆ ಮತ್ತು ಕೃತಕ ಬುದ್ಧಿಮತ್ತೆಯ (AI) ಹೆಚ್ಚಳದಿಂದ ಇಂದಿನ ಯುವ ಜನತೆಯ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಯ ಮೇಲೆ ಉಂಟಾಗುತ್ತಿರುವ ದುಷ್ಪರಿಣಾಮಗಳ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಮಕ್ಕಳು ಕೇವಲ ಮೊಬೈಲ್ ಗೇಮ್‌ಗಳಿಗೆ ಸೀಮಿತಗೊಳ್ಳದೆ ಮೈದಾನಕ್ಕಿಳಿದು ದೈಹಿಕ ಆಟಗಳನ್ನು ಆಡುವ ಮೂಲಕ ನೈಜ ಜೀವನದ ಕೌಶಲ್ಯಗಳನ್ನು ರೂಢಿಸಿಕೊಳ್ಳಬೇಕೆಂದು ಕರೆ ನೀಡಿದ ಅವರು, ಇಂದಿನ ಪೋಷಕರು ತಮ್ಮ ಮಕ್ಕಳ ಸುರಕ್ಷತೆಯ ಹೆಸರಿನಲ್ಲಿ ಮೊಬೈಲ್ ನೀಡಿ ಅವರನ್ನು ಪ್ರತ್ಯೇಕವಾಗಿರಿಸುತ್ತಿರುವುದು ಸಾಮಾಜಿಕ ಮತ್ತು ನಾಯಕತ್ವ ಗುಣಗಳ ಕೊರತೆಗೆ ಕಾರಣವಾಗುತ್ತಿದೆ ಎಂದು ಎಚ್ಚರಿಸಿದರು. ಅಲ್ಲದೆ, ಮುಂದಿನ ದಿನಗಳಲ್ಲಿ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ (AI) ತಂತ್ರಜ್ಞಾನವು ಪ್ರತಿಯೊಂದು ಕ್ಷೇತ್ರವನ್ನೂ ಆವರಿಸಿಕೊಳ್ಳುತ್ತಿದ್ದು, ಕೇವಲ ಶೈಕ್ಷಣಿಕ ಜ್ಞಾನದೊಂದಿಗೆ ದೈಹಿಕ ಹಾಗೂ ಪ್ರಾಯೋಗಿಕ ಕೌಶಲ್ಯಗಳನ್ನು ಹೊಂದಿಲ್ಲದಿದ್ದರೆ ಭವಿಷ್ಯದಲ್ಲಿ ತೀವ್ರ ಸ್ಪರ್ಧೆಯನ್ನು ಎದುರಿಸುವುದು ಕಷ್ಟವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಶ್ರೀ ಸ್ವಾಮೀಜಿ ಅವರು ಮುಖ್ಯ ಅತಿಥಿಗಳಿಗೆ ಸನ್ಮಾನ ನೆರವೇರಿಸಿದ ನಂತರ, ಎಸ್.ಎಸ್. ಎಜ್ಯುಕೇಶನ್ ಟ್ರಸ್ಟ್‌ನ ಕಾರ್ಯದರ್ಶಿಗಳಾದ ಎಸ್.ಪಿ. ಹಿರೇಮಠ್ ಅವರು ಸಮಾರಂಭದ ಅಧ್ಯಕ್ಷೀಯ ನುಡಿಗಳನ್ನಾಡಿದರು. ಈ ಸಮಾರಂಭದಲ್ಲಿ ಪ್ರಾರ್ಥನಾ ಗೀತೆಯನ್ನು 10ನೇ ತರಗತಿಯ ವಿದ್ಯಾರ್ಥಿಗಳು ಪ್ರಸ್ತುತಪಡಿಸಿದರು, ಪೂಜಾ ನಾಯ್ಕ್ ಸ್ವಾಗತ ಭಾಷಣ ಮಾಡಿದರು ಮತ್ತು ರೋಹಿಣಿ ಕೆ.ಸಿ. ಅವರು ಅತಿಥಿಗಳನ್ನು ಪರಿಚಯಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಮುಮ್ತಾಜ್ ಅವರು ವಂದನಾರ್ಪಣೆಗೈದು ಸಮಾರಂಭವನ್ನು ಯಶಸ್ವಿಗೊಳಿಸಿದರು.

Tags:

error: Content is protected !!