ಸಾವಯವ ಅಂತಾ ಹೇಳಿ ಮಾರಾಟ ಮಾಡೋ ಆಹಾರ ನಿಜಕ್ಕೂ ಸಾವಯವನಾ.ಮಾರುಕಟ್ಟೆಯಲ್ಲಿ ಸಾವಯವ ಹೆಸರಿನಲ್ಲಿ ಸಿಗೋ ಆಹಾರ ಪದಾರ್ಥಗಳ ಬಗ್ಗೆ ಜನರಿಗೆ ಎಷ್ಟು ನಂಬಿಕೆ ಇದೆ.ಇಂತಹ ಪ್ರಶ್ನೆಗಳ ನಡುವೆ ಬಳ್ಳಾರಿಯಲ್ಲಿ ರೈತರು ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದಾರೆ.ಮಧ್ಯವರ್ತಿಗಳಿಲ್ಲದೆ ರೈತರಿಂದಲೇ ನೇರವಾಗಿ ಗ್ರಾಹಕರಿಗೆ ಸಾವಯವ ಉತ್ಪನ್ನಗಳನ್ನ ತಲುಪಿಸೋ ಪ್ರಯತ್ನ ನಡೆದಿದೆ.ಬಳ್ಳಾರಿಯಲ್ಲಿ ಇದೇ ಮೊದಲ ಬಾರಿಗೆ ಸಾವಯವ ಕೃಷಿಕರೇ ಸೇರಿಕೊಂಡು ಸಾವಯವ ಕೃಷಿ ಮೇಳ ಆಯೋಜಿಸಿದ್ದಾರೆ.ಈ ಮೇಳದಲ್ಲಿ ಏನೆಲ್ಲಾ ಸಿಗ್ತಿದೆ ರೈತರ ಈ ಪ್ರಯತ್ನದ ಉದ್ದೇಶ ಏನು ಈ ಸ್ಟೋರಿ ನೋಡಿ


ಹೌದು ಬಳ್ಳಾರಿ ಗಾಂಧಿ ಭವನದಲ್ಲಿ ಕಂಡು ಬಂದಿರುವ ದೃಶ್ಯ ಇದು.ಎಲ್ಲೆಲ್ಲೂ ವಿವಿಧ ಬಗೆಯ ಕೃಷಿ ಉತ್ಪನ್ನಗಳು.ಒಂದೆಡೆ ತರಕಾರಿ,ಮತ್ತೊಂದೆಡೆ ಹಣ್ಣು,ದವಸ ಧಾನ್ಯಗಳು ಜೊತೆಗೆ ಉಪ್ಪಿನಕಾಯಿ,ಸಿಹಿ ತಿಂಡಿಗಳು,ತುಪ್ಪ, ಅಡುಗೆ ಎಣ್ಣೆ ಸೇರಿದಂತೆ ಹಲವು ಬಗೆಯ ಆಹಾರ ಪದಾರ್ಥಗಳು.ಇದು ಸಾಮಾನ್ಯ ಮಾರುಕಟ್ಟೆಯಲ್ಲ.ಬಳ್ಳಾರಿಯಲ್ಲಿ ಇದೇ ಮೊದಲ ಬಾರಿಗೆ ಆಯೋಜಿಸಿರುವ ಸಾವಯವ ಕೃಷಿ ಮೇಳ.ಸಾವಯವ ಕೃಷಿಕರೇ ಸೇರಿಕೊಂಡು ಆಯೋಜಿಸಿರುವ ಈ ಮೇಳದ ಪ್ರಮುಖ ಉದ್ದೇಶ ರೈತರು ಬೆಳೆದ ಉತ್ಪನ್ನಗಳನ್ನು ಯಾವುದೇ ಮಧ್ಯವರ್ತಿಗಳಿಲ್ಲದೆ ನೇರವಾಗಿ ಗ್ರಾಹಕರಿಗೆ ತಲುಪಿಸುವುದು. ರೈತರಿಂದ ಬಳಕೆದಾರರಿಗೆ’ ಅನ್ನೋ ಧ್ಯೇಯವಾಕ್ಯದೊಂದಿಗೆ ಮೇಳ ಆಯೋಜಿಸಲಾಗಿದೆ.ಬಳ್ಳಾರಿ ಮಾತ್ರವಲ್ಲದೆ ವಿಜಯನಗರ ಮತ್ತು ಚಿತ್ರದುರ್ಗ ಜಿಲ್ಲೆಗಳ ರೈತರು ಕೂಡ ಈ ಮೇಳದಲ್ಲಿ ಭಾಗಿಯಾಗಿದ್ದಾರೆ.ಬರೋಬ್ಬರಿ 150ಕ್ಕೂ ಹೆಚ್ಚು ಬಗೆಯ ಆಹಾರ ಉತ್ಪನ್ನಗಳು ಇಲ್ಲಿ ಮಾರಾಟಕ್ಕೆ ಇಡಲಾಗಿದೆ.
ತರಕಾರಿ,ಹಣ್ಣು,ದವಸ ಧಾನ್ಯಗಳಿಂದ ಹಿಡಿದು ಮನೆಯಲ್ಲೇ ತಯಾರಿಸಿದ ಉಪ್ಪಿನಕಾಯಿ,ಸಿಹಿ ತಿಂಡಿ,ತುಪ್ಪ, ಅಡುಗೆ ಎಣ್ಣೆ ಸೇರಿದಂತೆ ವಿವಿಧ ಕೃಷಿ ಉತ್ಪನ್ನಗಳು ಗ್ರಾಹಕರ ಗಮನ ಸೆಳೆಯುತ್ತಿವೆ.

ಇತ್ತೀಚಿನ ದಿನಗಳಲ್ಲಿ ಸಾವಯವ ಆಹಾರದ ಬಗ್ಗೆ ಜನರಲ್ಲಿ ಆಸಕ್ತಿ ಹೆಚ್ಚಾಗಿದೆ.ಆದ್ರೆ ಇದೇ ಸಂದರ್ಭದಲ್ಲಿ ಸಾವಯವ ಹೆಸರಿನಲ್ಲಿ ಗುಣಮಟ್ಟದ ಬಗ್ಗೆ ಅನುಮಾನ ಇರುವ ಆಹಾರ ಪದಾರ್ಥಗಳು ಮಾರುಕಟ್ಟೆಗೆ ಬರುತ್ತಿವೆ ಅನ್ನೋ ಆರೋಪವೂ ಕೇಳಿ ಬರುತ್ತಿದೆ.ವಿಷಯುಕ್ತ ಆಹಾರ ಸೇವನೆಯಿಂದ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ ಅನ್ನೋ ಆತಂಕ ರೈತರಲ್ಲಿದೆ.ಆದ್ರೆ ಆಹಾರದಿಂದ ಆರೋಗ್ಯಕ್ಕೆ ಸಮಸ್ಯೆ ಎದುರಾದಾಗ ವೈದ್ಯರ ಬಳಿ ಹೋದ ನಂತರವೇ ನಾವು ಸೇವಿಸುವ ಆಹಾರದ ಗುಣಮಟ್ಟದ ಬಗ್ಗೆ ಯೋಚನೆ ಮಾಡ್ತೇವೆ ಅನ್ನೋದು ರೈತರ ಅಭಿಪ್ರಾಯ.ಇದೇ ಕಾರಣಕ್ಕೆ ಸಾವಯವ ಕೃಷಿಯ ಮಹತ್ವದ ಬಗ್ಗೆ ಜನರಿಗೆ ಅರಿವು ಮೂಡಿಸಬೇಕು.ಸಾವಯವ ಕೃಷಿ ಪದ್ಧತಿಯಿಂದ ಬೆಳೆಯುವ ಆಹಾರ ಉತ್ಪನ್ನಗಳ ಬಗ್ಗೆ ಮಾಹಿತಿ ನೀಡಬೇಕು.ರೈತರು ನೇರವಾಗಿ ಗ್ರಾಹಕರನ್ನು ತಲುಪುವಂತಾಗಬೇಕು ಅನ್ನೋ ಉದ್ದೇಶದಿಂದ ಈ ಮೇಳ ಆಯೋಜಿಸಲಾಗಿದೆ.ಸಾವಯವ ಕೃಷಿಯಲ್ಲಿ ರಾಸಾಯನಿಕ ಬಳಕೆಯನ್ನು ಕಡಿಮೆ ಮಾಡಿ ನೈಸರ್ಗಿಕ ವಿಧಾನಗಳ ಮೂಲಕ ಬೆಳೆ ಬೆಳೆಯಲಾಗುತ್ತದೆ. ರೈತರು ತಾವು ಬೆಳೆದ ಉತ್ಪನ್ನಗಳನ್ನೇ ಗ್ರಾಹಕರಿಗೆ ಪರಿಚಯಿಸುವ ಮೂಲಕ ಸಾವಯವ ಆಹಾರದ ಬಗ್ಗೆ ನಂಬಿಕೆ ಮೂಡಿಸುವ ಪ್ರಯತ್ನ ಮಾಡುತ್ತಿದ್ದಾರೆ.ಮೇಳಕ್ಕೆ ಆಗಮಿಸುವ ಗ್ರಾಹಕರು ಉತ್ಪನ್ನಗಳನ್ನ ನೋಡೋದು ಮಾತ್ರವಲ್ಲದೆ ರೈತರೊಂದಿಗೆ ನೇರವಾಗಿ ಮಾತನಾಡಿ ಕೃಷಿ ಪದ್ಧತಿ ಉತ್ಪನ್ನಗಳ ತಯಾರಿಕೆ ಹಾಗೂ ಗುಣಮಟ್ಟದ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ.
ಒಟ್ಟಿನಲ್ಲಿ ಸಾವಯವ ಅನ್ನೋ ಹೆಸರನ್ನ ಕೇಳಿದ್ರೆ ಸಾಕು ಆರೋಗ್ಯಕರ ಆಹಾರ ಅನ್ನೋ ನಂಬಿಕೆ ಜನರಲ್ಲಿದೆ.ಆದ್ರೆ ಆ ನಂಬಿಕೆ ದುರ್ಬಳಕೆಯಾಗಬಾರದು ಅನ್ನೋ ಕಾರಣಕ್ಕೆ ರೈತರೇ ಇದೀಗ ನೇರವಾಗಿ ಗ್ರಾಹಕರ ಮುಂದೆ ಬಂದಿದ್ದಾರೆ.ರೈತನ ಜಮೀನಿನಿಂದ ನೇರವಾಗಿ ಗ್ರಾಹಕರ ಅಡುಗೆ ಮನೆಗೆ. ಮಧ್ಯವರ್ತಿಗಳಿಲ್ಲದೆ ಗುಣಮಟ್ಟದ ಆಹಾರ ತಲುಪಿಸುವ ಈ ಪ್ರಯತ್ನ ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತೆ ಅನ್ನೋದನ್ನ ಕಾದು ನೋಡಬೇಕಿದೆ
