gokak

ಗೋಕಾಕದಲ್ಲಿ ಅಕ್ರಮ ಬಡ್ಡಿ ದಂಧೆ: ಅಪ್ಪ-ಮಗನ ವಿರುದ್ಧ ಪ್ರಕರಣ ದಾಖಲು, ₹೬.೧೫ ಲಕ್ಷ ನಗದು ಜಪ್ತಿ

Share

ಗೋಕಾಕ ನಗರದಲ್ಲಿ ಕಾನೂನುಬಾಹಿರವಾಗಿ ಹೆಚ್ಚಿನ ಬಡ್ಡಿ ವಸೂಲಿ ಮಾಡುತ್ತಿದ್ದ ಇಬ್ಬರು ಬಡ್ಡಿ ದಂಧೆಕೋರರ ವಿರುದ್ಧ ಗೋಕಾಕ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೆ.ಎಸ್.ಪಿ ಆಪ್ (KSP App) ನಲ್ಲಿ ಬಂದ ದೂರಿನ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ ಪೊಲೀಸರು, ಆರೋಪಿಗಳ ಮನೆಯಿಂದ ಲಕ್ಷಾಂತರ ರೂಪಾಯಿ ನಗದು ಹಾಗೂ ಹಲವು ಅಕ್ರಮ ದಾಖಲೆಗಳನ್ನು ಜಪ್ತಿ ಮಾಡಿದ್ದಾರೆ.

ಗೋಕಾಕ ನಗರದಲ್ಲಿ ಅಕ್ರಮ ಬಡ್ಡಿ ದಂಧೆ ನಡೆಸುತ್ತಿದ್ದ ಯಲ್ಲಪ್ಪ ಬಿರಾಜಗೋಳ ಹಾಗೂ ಆತನ ಮಗ ವಿಠ್ಠಲ್ ಯಲ್ಲಪ್ಪ ಬಿರಾಜಗೋಳ ಎಂಬುವವರ ಮೇಲೆ ಗೋಕಾಕ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಾರ್ವಜನಿಕರೊಬ್ಬರು ಕೆ.ಎಸ್.ಪಿ ಆಪ್ ಮೂಲಕ ಸಲ್ಲಿಸಿದ್ದ ಅರ್ಜಿಯನ್ನು ಆಧರಿಸಿ, ನ್ಯಾಯಾಲಯದಿಂದ ಸರ್ಚ್ ವಾರಂಟ್ ಪಡೆದ ಪೊಲೀಸರು ಆರೋಪಿಗಳ ಮನೆಗೆ ತೆರಳಿ ದಾಳಿ ನಡೆಸಿದ್ದರು. ಪರಿಶೀಲನೆ ವೇಳೆ ಮನೆಯಲ್ಲಿದ್ದ ೬.೧೫ ಲಕ್ಷ ರೂಪಾಯಿ (₹೬,೧೫,೦೦೦) ನಗದು ಹಣ ಹಾಗೂ ಅಕ್ರಮ ಬಡ್ಡಿ ದಂಧೆಗೆ ಸಂಬಂಧಿಸಿದ ಹಲವು ಬ್ಲಾಂಕ್ ಚೆಕ್‌ಗಳು, ಪ್ರಾಮಿಸರಿ ನೋಟ್‌ಗಳು ಮತ್ತು ಖಾಲಿ ಬಾಂಡ್ ಪೇಪರ್‌ಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ‘ಕರ್ನಾಟಕ ಅತ್ಯಧಿಕ ಬಡ್ಡಿ ವಸೂಲಿ ನಿಷೇಧ ಕಾಯ್ದೆ ೨೦೦೪’ (Karnataka Prohibition of Charging Exorbitant Interest Act 2004) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಗೋಕಾಕ ಶಹರ ಠಾಣೆಯ ಪೊಲೀಸರು, ಅಪ್ಪ-ಮಗ ಇಬ್ಬರನ್ನೂ ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ.

Tags:

error: Content is protected !!