ಬೆಳಗಾವಿ ಗಣೇಶೋತ್ಸವಕ್ಕೆ ಸಕಲ ಸಿದ್ಧತೆಗಳು ಆರಂಭವಾಗಿದ್ದು, ಈ ಬಾರಿಯೂ ಮಂಡಳಿಗಳ ವಿದ್ಯುತ್ ವೆಚ್ಚವನ್ನು ಜಿಲ್ಲಾಡಳಿತವೇ ಭರಿಸಲಿದೆ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಪ್ರಮುಖ ಘೋಷಣೆ ಮಾಡಿದ್ದಾರೆ. ಯಾವುದೇ ಭೇದಭಾವವಿಲ್ಲದೆ ಇಡೀ ದೇಶಕ್ಕೆ ಮಾದರಿಯಾಗುವಂತೆ ಸೌಹಾರ್ದತೆಯಿಂದ ಹಬ್ಬ ಆಚರಿಸಲು ಡಿಸಿ ಕರೆ ನೀಡಿದ್ದಾರೆ.


ಮುಂಬರುವ ಗಣೇಶೋತ್ಸವದ ಹಿನ್ನೆಲೆ ಇಂದು ಬೆಳಗಾವಿಯ ಕುಮಾರಗಂಧರ್ವ ಕಲಾ ಮಂದಿರದಲ್ಲಿ ಬೆಳಗಾವಿ ಜಿಲ್ಲಾಡಳಿತ ಮತ್ತು ಗಣೇಶೋತ್ಸವ ಮಹಾಮಂಡಳಗಳ ಸಭೆಯನ್ನು ಕರೆಯಲಾಗಿತ್ತು.

ಮಧ್ಯವರ್ತಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಮಹಾಮಂಡಳದ ಪರವಾಗಿ ಮಾತನಾಡಿದ ಸಾಗರ್ ಪಾಟೀಲ್ ಹಾಗೂ ಲೋಕಮಾನ್ಯ ಶ್ರೀ ಗಣೇಶೋತ್ಸವ ಮಹಾಮಂಡಳದ ಅಧ್ಯಕ್ಷ ವಿಜಯ್ ಜಾಧವ ಅವರು, ಮುಂಬರುವ ಗಣೇಶೋತ್ಸವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆಗೆ ಎರಡು ಪ್ರಮುಖ ಬೇಡಿಕೆಗಳನ್ನು ಸಲ್ಲಿಸಲಾಗಿದೆ. ಕಪಿಲೇಶ್ವರ ಕೆರೆಯಲ್ಲಿನ ಹಳೆಯ ವಿಸರ್ಜನಾ ಟ್ಯಾಂಕ್ ವಿಸ್ತರಣೆ ಮತ್ತು ಛತ್ರಪತಿ ಶಿವಾಜೀ ಮಹಾರಾಜ್ ಗಾರ್ಡನ್ ಬಳಿ ಹೊಸ ಕೃತಕ ವಿಸರ್ಜನಾ ಟ್ಯಾಂಕ್ ನಿರ್ಮಾಣಕ್ಕೆ ಒತ್ತಾಯಿಸಿದರು. ನಗರದ ಶಹಾಪೂರ ಸೇರಿದಂತೆ ವಿವಿಧ ಭಾಗಗಳಲ್ಲಿ ಎಲ್&ಟಿ ಹಾಗೂ ಗ್ಯಾಸ್ ಪೈಪ್‌ಲೈನ್ ಕಾಮಗಾರಿಯಿಂದ ಸೃಷ್ಟಿಯಾಗಿರುವ ರಸ್ತೆ ಗುಂಡಿಗಳನ್ನು ತಕ್ಷಣವೇ ದುರಸ್ತಿಗೊಳಿಸಿ ಮೆರವಣಿಗೆಗೆ ಅನುಕೂಲ ಮಾಡಿಕೊಡಬೇಕೆಂದು ಮನವಿ ಮಾಡಿದರು.

ಬೆಳಗಾವಿಯಲ್ಲಿ ಸೌಹಾರ್ದಯುತ ಹಾಗೂ ಸುಗಮ ಗಣೇಶೋತ್ಸವ ಆಚರಣೆಗೆ ಅಗತ್ಯವಿರುವ ಮೂಲಸೌಕರ್ಯಗಳನ್ನು ಕಲ್ಪಿಸುವಂತೆ ಸಾರ್ವಜನಿಕ ಗಣೇಶೋತ್ಸವ ಮಹಾಮಂಡಳದ ಪ್ರಧಾನ ಕಾರ್ಯದರ್ಶಿ ವಿಕಾಸ್ ಕಲಘಟಗಿ ಹಾಗೂ ಶಹಾಪೂರ ಶ್ರೀ ಗಣೇಶೋತ್ಸವ ಮಹಾಮಂಡಳದ ಪ್ರಮುಖರಾದ ನೇತಾಜೀರಾವ್ ಜಾಧವ್ ಅವರು ಮಹಾನಗರ ಪಾಲಿಕೆ ಮತ್ತು ಪೊಲೀಸ್ ಕಮಿಷನರ್ ಅವರು ಆಗ್ರಹಿಸಿದ್ದಾರೆ. ಮೆರವಣಿಗೆ ಸಾಗುವ ರಸ್ತೆಗಳ ಗುಂಡಿ ಮುಚ್ಚುವುದು, ಮಂಟಪ ಹಾಗೂ ವಿಸರ್ಜನಾ ಮಾರ್ಗಗಳಲ್ಲಿ ಸ್ವಚ್ಛತೆ ಮತ್ತು ಶೌಚಾಲಯ ವ್ಯವಸ್ಥೆ ಕಲ್ಪಿಸುವುದು, ಅಪಾಯಕಾರಿ ಮರದ ಕೊಂಬೆಗಳನ್ನು ತೆರವುಗೊಳಿಸುವುದು ಸೇರಿದಂತೆ ಎತ್ತರದ ಮೂರ್ತಿಗಳ ಸುಲಭ ಸಂಚಾರಕ್ಕೆ ಅನುಕೂಲವಾಗುವಂತೆ ಹೆಸ್ಕಾಂ ವಿದ್ಯುತ್ ತಂತಿಗಳ ಎತ್ತರ ಹೆಚ್ಚಿಸುವಂತೆ ಅವರು ಒತ್ತಾಯಿಸಿದ್ದಾರೆ. ಹೆಸ್ಕಾಂನ ನಿರಂತರ ಸಹಕಾರವನ್ನು ಶ್ಲಾಘಿಸಿದ ಅವರು, ಎಲ್ಲಾ ಸರ್ಕಾರಿ ಇಲಾಖೆಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಿ ಹಬ್ಬವನ್ನು ಯಶಸ್ವಿಗೊಳಿಸಬೇಕೆಂದು ಕೋರಿದ್ದಾರೆ.

ಉಪಮಹಾಪೌರ ಹಣುಮಂತ ಕೊಂಗಾಲಿ ಅವರು ಗಣೇಶೋತ್ಸವದ ಹಿನ್ನೆಲೆಯಲ್ಲಿ ನಗರದ ರಸ್ತೆ ಗುಂಡಿಗಳನ್ನು ತಕ್ಷಣವೇ ಮುಚ್ಚಿ, ಸುಗಮ ಮೆರವಣಿಗೆಗೆ ಅನುಕೂಲ ಮಾಡಿಕೊಡಬೇಕೆಂದು ಮಹಾನಗರ ಪಾಲಿಕೆ ಹಾಗೂ ಜಿಲ್ಲಾಡಳಿತಕ್ಕೆ ಸಾರ್ವಜನಿಕರು ಮನವಿ ಮಾಡಿದ್ದಾರೆ. ನಗರದ ವಿವಿಧ ವಿಸರ್ಜನಾ ಕೆರೆಗಳ ಸ್ವಚ್ಛತೆ, ಬೀದಿ ದೀಪಗಳ ನಿರ್ವಹಣೆ ಹಾಗೂ ಮರದ ಕೊಂಬೆಗಳ ತೆರವಿಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗಿದೆ. ಈ ಎಲ್ಲ ಕೆಲಸಗಳನ್ನು ಮಹಾನಗರ ಪಾಲಿಕೆ ಮಾಡಲಿದೆ ಎಂದರು.
ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ಕಳೆದ ಬಾರಿ ಗಣೇಶೋತ್ಸವದ ವೇಳೆ ಹೆಸ್ಕಾಂ ಬಿಲ್ ವಿನಾಯಿತಿ ನೀಡಲಾಗಿದ್ದು, ಈ ಬಾರಿಯ ವಿದ್ಯುತ್ ವೆಚ್ಚವನ್ನೂ (₹10 ಲಕ್ಷದೊಳಗೆ) ಜಿಲ್ಲಾಡಳಿತ ಮತ್ತು ಮಹಾನಗರ ಪಾಲಿಕೆ ಭರಿಸಲಿದೆ ಎಂದು ತಿಳಿಸುತ್ತಾ ವಿದ್ಯುತ್ ದುರ್ಬಳಕೆ ಮಾಡದಂತೆ ಕೋರಿದರು. ಜಿಲ್ಲಾಡಳಿತ, ಪೊಲೀಸ್, ಪಾಲಿಕೆ ಮತ್ತು ಮಹಾಮಂಡಳಗಳು ಒಗ್ಗಟ್ಟಿನಿಂದ ಶ್ರಮಿಸಿ ಸಣ್ಣಪುಟ್ಟ ಲೋಪಗಳನ್ನು ಸರಿಪಡಿಸಲಿದ್ದು, ‘ನಮ್ಮ-ನಿಮ್ಮ ಹಬ್ಬ’ ಎಂಬ ಭೇದವಿಲ್ಲದೆ ಸೌಹಾರ್ದತೆಯಿಂದ ಇಡೀ ದೇಶಕ್ಕೆ ಮಾದರಿಯಾಗುವಂತೆ ಹಾಗೂ ಅದ್ದೂರಿಯಾಗಿ ಹಬ್ಬವನ್ನು ಯಶಸ್ವಿಗೊಳಿಸಲು ಎಲ್ಲರ ಸಹಕಾರ ಕೋರಿದರು.
ನಗರ ಪೊಲೀಸ್ ಆಯುಕ್ತರಾದ ಭೂಷಣ್ ಬೋರಸೆ ಅವರು ಈ ಬಾರಿಯೂ ಡಿಜೆ ಬಳಸಲು ಅನುಮತಿಯಿಲ್ಲ ಹಾಗೂ ಸಾರ್ವಜನಿಕ ಗಣೇಶ ಮೂರ್ತಿಗಳ ಎತ್ತರ 12 ಅಡಿಗೆ ಮಾತ್ರ ಸೀಮಿತವಾಗಿದ್ದು, ವಿಸರ್ಜನೆ ಸುಲಭಗೊಳಿಸಲು ಮೂರ್ತಿಗಳಿಗೆ ಕಡ್ಡಾಯವಾಗಿ ಹುಕ್ ಅಳವಡಿಸಬೇಕು ಎಂದು ಸೂಚಿಸಿದರು. ನಗರದ 14 ಲಕ್ಷ ಜನರ ಸುರಕ್ಷತೆ ಮತ್ತು ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಪೊಲೀಸರೊಂದಿಗೆ ಮಂಡಳಿಗಳು ಸಹಕರಿಸಬೇಕಿದ್ದು, ಪ್ರತಿ ಮಂಡಳಿಗೆ ಒಬ್ಬ ಸಿಬ್ಬಂದಿ ನೇಮಕ ಹಾಗೂ ಪೆಂಡಾಲ್‌ಗಳಲ್ಲಿ ಕಡ್ಡಾಯ ಸಿಟಿವಿ ಕ್ಯಾಮೆರಾ ಅಳವಡಿಕೆ ಮೂಲಕ ಕಳವು ತಡೆಯಲು ಕ್ರಮ ವಹಿಸಲಾಗುವುದು ಎಂದರು. ಜೊತೆಗೆ ಅಶ್ಲೀಲ ಹಾಡುಗಳ ನಿಷೇಧ ಹಾಗೂ ರಾತ್ರಿ 10 ಗಂಟೆಯ ನಂತರ ಧ್ವನಿವರ್ಧಕ ಬಳಸದಂತೆ ನಿಯಮಗಳನ್ನು ಪಾಲಿಸಲು ಮಂಡಳಿಗಳಿಗೆ ಖಡಕ್ ನಿರ್ದೇಶನ ನೀಡಿದರು. ಬೈಟ್
ಈ ವೇಳೆ ಮಹಾಪೌರ ಪ್ರೀತಿ ಕಾಮಕರ, ಮಹಾನಗರ ಪಾಲಿಕೆ ಆಯುಕ್ತರಾದ ಕಾರ್ತಿಕ್ ಎಂ., ಗಣೇಶೋತ್ಸವ ಮಹಾಮಂಡಳದ ಪದಾಧಿಕಾರಿಗಳು ಸೇರಿದಂತೆ ಇನ್ನುಳಿದವರು ಉಪಸ್ಥಿತರಿದ್ಧರು.
