ವಿಜಯನಗರ ಜಿಲ್ಲೆಯ ವಿಶ್ವವಿಖ್ಯಾತ ಹಂಪಿಯಲ್ಲಿ ಇಂದು ಬೆಳ್ಳಂಬೆಳಗ್ಗೆ ಘೋರ ದುರಂತವೊಂದು ಸಂಭವಿಸಿದೆ. ಆಂಧ್ರಪ್ರದೇಶದಿಂದ ಪ್ರವಾಸಕ್ಕೆ ಬಂದಿದ್ದ ತಾಯಿ ಮತ್ತು ಮಗಳು ತುಂಗಭದ್ರಾ ನದಿಯಲ್ಲಿ ಸ್ನಾನಕ್ಕೆ ಇಳಿದಾಗ ನೀರಿನ ಸುಳಿಗೆ ಸಿಲುಕಿ ಕೊಚ್ಚಿಕೊಂಡು ಹೋಗಿದ್ದಾರೆ. ಸ್ಥಳದಲ್ಲಿ ಪೊಲೀಸ್ ಹಾಗೂ ಅಗ್ನಿಶಾಮಕ ದಳದಿಂದ ಶೋಧಕಾರ್ಯ ಮುಂದುವರೆದಿದೆ.

ಆಂಧ್ರಪ್ರದೇಶದ ಕರ್ನೂಲ್ ಮೂಲದ ಶಾಹೀನ್ (38) ಹಾಗೂ ಅವರ ಮಗಳು ಯಾಸ್ಮೀನ್ (13) ತಮ್ಮ ಸಂಬಂಧಿಕರೊಂದಿಗೆ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಹಂಪಿಗೆ ಪ್ರವಾಸಕ್ಕೆ ಬಂದಿದ್ದ ವೇಳೆ ಈ ದಾರುಣ ಘಟನೆ ಸಂಭವಿಸಿದೆ. ಇಂದು ಬೆಳಗ್ಗೆ ಹಂಪಿಯ ಸ್ನಾನಘಟ್ಟದ ಬಳಿ ತುಂಗಭದ್ರಾ ನದಿಯಲ್ಲಿ ಸ್ನಾನಕ್ಕೆ ಇಳಿದಿದ್ದಾಗ ಬಾಲಕಿ ಯಾಸ್ಮೀನ್ ದಿಢೀರ್ ಆಗಿ ನೀರಿನ ಸುಳಿಗೆ ಸಿಲುಕಿ ತೇಲಿಹೋಗಿದ್ದಾಳೆ. ಈ ವೇಳೆ ಮಗಳನ್ನ ಕಾಪಾಡಲು ಮುಂದಾದ ತಾಯಿ ಶಾಹೀನ್ ಕೂಡ ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿ ನೀರುಪಾಲಾಗಿದ್ದಾರೆ. ದುರ್ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಹಂಪಿ ಪ್ರವಾಸಿ ಪೊಲೀಸ್ ಠಾಣೆಯ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದು, ನದಿಯಲ್ಲಿ ಕಣ್ಮರೆಯಾಗಿರುವ ತಾಯಿ ಮತ್ತು ಮಗಳಿಗಾಗಿ ತೀವ್ರ ಶೋಧಕಾರ್ಯ ನಡೆಸುತ್ತಿದ್ದಾರೆ.
