ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಪರಿಶಿಷ್ಟ ಜಾತಿ (ಎಸ್‌ಸಿ) ಇಲಾಖೆಯ ರಾಜ್ಯ ನಿರ್ದೇಶಕರಾಗಿ ನೇಮಕಗೊಂಡಿರುವ ಬೆಳಗಾವಿಯ ಹಿರಿಯ ಕಾಂಗ್ರೆಸ್ ಮುಖಂಡ ಹಾಗೂ ಸಮಾಜಸೇವಕ ಮಲ್ಲೇಶ್ ಚೌಗುಲೆ ಅವರನ್ನು ನಗರದ ಕಾಂಗ್ರೆಸ್ ಭವನದಲ್ಲಿ ವಿವಿಧ ದಲಿತ ಸಮುದಾಯಗಳ ಸಂಘಟನೆಗಳು ಆತ್ಮೀಯವಾಗಿ ಸನ್ಮಾನಿಸಿ ಅಭಿನಂದಿಸಿದವು.

ಕೆಪಿಸಿಸಿ ಎಸ್‌ಸಿ ಇಲಾಖೆಯ ರಾಜ್ಯ ಉಪಾಧ್ಯಕ್ಷ ಲಕ್ಷ್ಮಣ್ ಲಗ್ಮಾಪ್‌ಗೋಳ್ ಅವರ ನೇತೃತ್ವದಲ್ಲಿ ನಡೆದ ಸಮಾರಂಭದಲ್ಲಿ ಮಲ್ಲೇಶ್ ಚೌಗುಲೆ ಅವರಿಗೆ ಶಾಲು ಹೊದಿಸಿ, ಹೂಗುಚ್ಛ ನೀಡಿ ಗೌರವಿಸಲಾಯಿತು. ರಾಜ್ಯ ಮಟ್ಟದ ಜವಾಬ್ದಾರಿ ದೊರೆತಿರುವ ಹಿನ್ನೆಲೆಯಲ್ಲಿ ವಿವಿಧ ಸಮಾಜಗಳ ಮುಖಂಡರು ಅಭಿನಂದನೆ ಸಲ್ಲಿಸಿ, ಮುಂದಿನ ಸಂಘಟನಾ ಕಾರ್ಯಗಳಿಗೆ ಶುಭ ಹಾರೈಸಿದರು.
ಸಮಾರಂಭದಲ್ಲಿ ಮಾತನಾಡಿದ ಮುಖಂಡರು, ಮಲ್ಲೇಶ್ ಚೌಗುಲೆ ಅವರು ಹಲವು ವರ್ಷಗಳಿಂದ ಕಾಂಗ್ರೆಸ್ ಸಂಘಟನೆಯಲ್ಲಿ ಹಾಗೂ ಸಮಾಜ ಸೇವೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು, ಅವರ ಸೇವೆಯನ್ನು ಗುರುತಿಸಿ ರಾಜ್ಯ ನಿರ್ದೇಶಕರ ಜವಾಬ್ದಾರಿ ನೀಡಲಾಗಿದೆ. ಈ ಮೂಲಕ ಪರಿಶಿಷ್ಟ ಜಾತಿ ಸಮುದಾಯದ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ಪರಿಣಾಮಕಾರಿಯಾಗಿ ತಲುಪಿಸುವ ಜೊತೆಗೆ, ಸಂಘಟನೆಯನ್ನು ತಳಮಟ್ಟದಿಂದ ಮತ್ತಷ್ಟು ಬಲಪಡಿಸುವಲ್ಲಿ ಅವರು ಪ್ರಮುಖ ಪಾತ್ರವಹಿಸಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಮಲ್ಲೇಶ್ ಚೌಗುಲೆ, ತಮ್ಮ ಮೇಲೆ ವಿಶ್ವಾಸವಿಟ್ಟು ರಾಜ್ಯ ಮಟ್ಟದ ಹೊಣೆಗಾರಿಕೆ ನೀಡಿದ ಕಾಂಗ್ರೆಸ್ ಪಕ್ಷದ ನಾಯಕತ್ವಕ್ಕೆ ಕೃತಜ್ಞತೆ ಸಲ್ಲಿಸಿದರು. ಪಕ್ಷದ ಸಿದ್ಧಾಂತಗಳಿಗೆ ಬದ್ಧರಾಗಿ ಕಾರ್ಯನಿರ್ವಹಿಸುವುದರ ಜೊತೆಗೆ, ಪರಿಶಿಷ್ಟ ಜಾತಿ ಸಮುದಾಯದ ಹಕ್ಕುಗಳ ರಕ್ಷಣೆ, ಯುವಕರಿಗೆ ಸಂಘಟನೆಯಲ್ಲಿ ಹೆಚ್ಚಿನ ಅವಕಾಶ ಕಲ್ಪಿಸುವುದು ಹಾಗೂ ಸಾಮಾಜಿಕ ನ್ಯಾಯದ ಪರವಾಗಿ ನಿರಂತರವಾಗಿ ಕೆಲಸ ಮಾಡುವುದಾಗಿ ತಿಳಿಸಿದರು. ಸನ್ಮಾನಿಸಿದ ವಿವಿಧ ದಲಿತ ಸಮುದಾಯಗಳ ಸಂಘಟನೆಗಳಿಗೂ ಅವರು ಧನ್ಯವಾದ ಅರ್ಪಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಸದ್ದಾಂ ತಹಶೀಲ್ದಾರ್, ಕಾಂಗ್ರೆಸ್ ಯುವ ಬ್ರಿಗೇಡ್ ಬೆಳಗಾವಿ ದಕ್ಷಿಣ ಘಟಕದ ಸಿದ್ಧಾರ್ಥ್ ಚವಾಣ್, ಚಾರ್ಮ್ ಕುಶಾಲ್ ಧಾರ್ಮಿಕ ಸಂಘದ ಅಧ್ಯಕ್ಷ ಸಂತೋಷ್ ಹೊಂಗಲ್, ಸಂಗರ್ ಸಮಾಜದ ಮುಖಂಡ ಹಿರಾಲಾಲ್ ಚವಾಣ್, ಧೋರ್ ಸಮಾಜದ ಅಧ್ಯಕ್ಷ ವಿಠ್ಠಲ್ ಪೋಲ್, ಎಸ್‌ಸಿ-ಎಸ್‌ಟಿ ಸಮಾಜದ ಅಧ್ಯಕ್ಷ ಸಂದೀಪ್ ಕೋಲ್ಕರ್, ಮಾಜಿ ಕಾರ್ಪೊರೇಟರ್ ರಾಜೇಶ್ ತಿರ್ಕ್‌ನವರ್, ಸಂಗರ್ ಸಮಾಜದ ನಾಯಕ ಸಂಜಯ್ ಚೌಗುಲೆ, ಮಾಂಗ್ ಸಮಾಜದ ನಾಯಕ ಸುರೇಶ್ ಲೋಂಧೆ, ಸಂತೋಷ್ ಕಾಂಬ್ಳೆ, ಇರಪ್ಪ ಕಲೆಮಾನಿ ಸೇರಿದಂತೆ ವಿವಿಧ ಸಮಾಜಗಳ ಮುಖಂಡರು, ಪದಾಧಿಕಾರಿಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು..
