Chikkodi

ಎನ್‌ಎಚ್-48ರ ಕಳಪೆ ಕಾಮಗಾರಿ: ಕೇಂದ್ರ ಸಚಿವ ನಿತಿನ್ ಗಡ್ಕರಿಯವರ ಭೇಟಿ, ಕಠಿಣ ಕ್ರಮಕ್ಕೆ ಶಾಸಕಿ ಶಶಿಕಲಾ ಜೊಲ್ಲೆ ಹಾಗೂ ಅಣ್ಣಾಸಾಹೇಬ ಜೊಲ್ಲೆ ಒತ್ತಾಯ

Share

ನಿಪ್ಪಾಣಿ:ರಾಷ್ಟ್ರೀಯ ಹೆದ್ದಾರಿ–48ರ ನೂತನ ಸೇತುವೆಯ ರಿಟೈನಿಂಗ್ ವಾಲ್ ಕುಸಿದ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ ಹಾಗೂ ಬೆಳಗಾವಿ ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷರಾದ ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ಮಂಗಳವಾರ ನವದೆಹಲಿಯಲ್ಲಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.

ನಿಪ್ಪಾಣಿ ನಗರದ ಗಾಂಧಿ ಆಸ್ಪತ್ರೆಯ ಬಳಿ ಇತ್ತೀಚೆಗೆ ನಡೆದ ಈ ಕುಸಿತದಿಂದಾಗಿ ಕಾಮಗಾರಿಯ ಗುಣಮಟ್ಟ ಮತ್ತು ಸಾರ್ವಜನಿಕರ ಸುರಕ್ಷತೆಯ ಬಗ್ಗೆ ತೀವ್ರ ಆತಂಕ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಹೊನಗಾ–ಕೋಗನೋಳಿ ಹೆದ್ದಾರಿ ಕಾಮಗಾರಿಯಲ್ಲಿ ಕಂಡುಬಂದಿರುವ ಕಳಪೆ ಗುಣಮಟ್ಟ, ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಇದರಿಂದ ಸಾರ್ವಜನಿಕರಿಗೆ ಎದುರಾಗಿರುವ ಅಪಾಯದ ಕುರಿತು ಕೇಂದ್ರ ಸಚಿವರಿಗೆ ವಿವರವಾಗಿ ಮನವರಿಕೆ ಮಾಡಿಕೊಡಲಾಯಿತು.

ವಿಷಯವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ ಕೇಂದ್ರ ಸಚಿವ ನಿತಿನ್ ಗಡ್ಕರಿ, ತಕ್ಷಣವೇ ಸಂಬಂಧಪಟ್ಟ ಗುತ್ತಿಗೆದಾರರನ್ನು ದೂರವಾಣಿ ಮೂಲಕ ಸಂಪರ್ಕಿಸಿ ತೀವ್ರ ತರಾಟೆಗೆ ತೆಗೆದುಕೊಂಡರು. “ಕಾಮಗಾರಿಯಲ್ಲಿ ಯಾವುದೇ ರೀತಿಯ ಕಳಪೆ ತರವನ್ನು ಸಹಿಸುವುದಿಲ್ಲ” ಎಂದು ಖಡಕ್ ಎಚ್ಚರಿಕೆ ನೀಡಿದರು.

ಇಂತಹ ತಾಂತ್ರಿಕ ಲೋಪಗಳು ಮತ್ತು ನಿರ್ಲಕ್ಷ್ಯ ಮರುಕಳಿಸಿದರೆ ಸಂಬಂಧಿತ ಗುತ್ತಿಗೆದಾರ ಸಂಸ್ಥೆಯನ್ನು ಮುಂದಿನ ಮೂರು ವರ್ಷಗಳ ಕಾಲ ಕಪ್ಪುಪಟ್ಟಿಗೆ (Blacklist) ಸೇರಿಸಲಾಗುವುದು ಎಂದು ತಿಳಿಸಿದ ಸಚಿವರು, ಕರ್ತವ್ಯಲೋಪ ಎಸಗಿದ ಅಧಿಕಾರಿಗಳ ವಿರುದ್ಧವೂ ಕಠಿಣ ಶಿಸ್ತುಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಇಲಾಖೆಗೆ ಸೂಚನೆ ನೀಡಿದರು.

ಹೆದ್ದಾರಿ ಕಾಮಗಾರಿಯ ಗುಣಮಟ್ಟದ ಮೇಲೆ ಸ್ವತಃ ವೈಯಕ್ತಿಕವಾಗಿ ನಿಗಾ ವಹಿಸಿ, ನಿಯಮಿತ ಪರಿಶೀಲನೆ ನಡೆಸುವುದಾಗಿ ಭರವಸೆ ನೀಡಿದ ಗಡ್ಕರಿ, ಸಾರ್ವಜನಿಕರಿಗೆ ಸುರಕ್ಷಿತ, ಗುಣಮಟ್ಟದ ಹಾಗೂ ಅಡೆತಡೆರಹಿತ ಸಂಚಾರ ವ್ಯವಸ್ಥೆ ಕಲ್ಪಿಸಲು ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದರು.

ಈ ಭೇಟಿಯ ಸಂದರ್ಭದಲ್ಲಿ ಮಾಜಿ ಸಂಸದರಾದ ಡಾ. ಉಮೇಶ್ ಜಾಧವ್ ಅವರು ಸಹ ಉಪಸ್ಥಿತರಿದ್ದರು.

Tags:

error: Content is protected !!