ಬೆಳಗಾವಿಯ ಕಾಂಟೋನ್ಮೆಂಟ್ ಬೋರ್ಡ್ ಮರಾಠಿ ಪ್ರಾಥಮಿಕ ಶಾಲೆಯಲ್ಲಿ ಮಹಾರಾಷ್ಟ್ರ ಏಕೀಕರಣ ಯುವ ಸಮಿತಿ ಹಾಗೂ ರಾಜ್ಯ ವಿಕಾಸ ಮರಾಠಿ ಸಂಸ್ಥೆಯ ಜಂಟಿ ಆಶ್ರಯದಲ್ಲಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಮಗ್ರಿಗಳನ್ನು ವಿತರಿಸಲಾಯಿತು. ಮರಾಠಿ ಶಾಲೆಗಳ ಸಬಲೀಕರಣ ಮತ್ತು ಮಕ್ಕಳ ದಾಖಲಾತಿ ಹೆಚ್ಚಿಸುವ ಉದ್ದೇಶದಿಂದ ಕಳೆದ ಒಂಬತ್ತು ವರ್ಷಗಳಿಂದ ಈ ಕಾರ್ಯಕ್ರಮ ನಡೆಸಲಾಗುತ್ತಿದೆ.
ಬೆಳಗಾವಿಯ ಕಾಂಟೋನ್ಮೆಂಟ್ ಬೋರ್ಡ್ ಮರಾಠಿ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಲಾಗಿದ್ದ ಶೈಕ್ಷಣಿಕ ಸಾಮಗ್ರಿ ವಿತರಣಾ ಕಾರ್ಯಕ್ರಮದ ಆರಂಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯ ಪ್ರಶಾಂತ್ ಬಿರ್ಜೆ ಎಲ್ಲರನ್ನೂ ಸ್ವಾಗತಿಸಿ ಯುವ ಸಮಿತಿಯ ಸಾಮಾಜಿಕ ಕಾಳಜಿಯನ್ನು ಶ್ಲಾಘಿಸಿದರು. ಸಮಿತಿಯ ಅಧ್ಯಕ್ಷ ಅಂಕುಶ್ ಕೇಸರ್ಕರ್ ಮಾತನಾಡಿ, ಮರಾಠಿ ಶಾಲೆಗಳನ್ನು ಉಳಿಸಲು ಹಾಗೂ ವಿದ್ಯಾರ್ಥಿಗಳ ಸಂಖ್ಯೆಯನ್ನು ಹೆಚ್ಚಿಸಲು ಕಳೆದ ಒಂಬತ್ತು ವರ್ಷಗಳಿಂದ ಒಂದನೇ ತರಗತಿ ಮಕ್ಕಳಿಗೆ ಪ್ರೋತ್ಸಾಹಕವಾಗಿ ಈ ಉಪಕ್ರಮ ನಡೆಸಲಾಗುತ್ತಿದೆ. ಶಾಲೆಗಳು ಉಳಿದರೆ ಮಾತ್ರ ಮಾತೃಭಾಷೆ ಮತ್ತು ಸಂಸ್ಕೃತಿ ಉಳಿಯಲು ಸಾಧ್ಯ ಎಂದು ಅಭಿಪ್ರಾಯಪಟ್ಟರು. ತದನಂತರ ಕಾರ್ಯಧ್ಯಕ್ಷ ಸಚಿನ್ ಕೆಳವೇಕರ್, ಖಜಾಂಚಿ ವಿನಾಯಕ್ ಕಾವಳೆ, ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ಕದಮ್ ಹಾಗೂ ಪದಾಧಿಕಾರಿಗಳಾದ ಸೂರಜ್ ಕುಡುಚಕರ್, ಅಕ್ಷಯ್ ಬಾಂಬರಕರ್ ಅವರ ಹಸ್ತದಿಂದ ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿಗಳನ್ನು ವಿತರಿಸಲಾಯಿತು.

